ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಮಾಜವೇ ತಲೆತಗ್ಗಿಸುವಂತಹ ಭೀಕರ ಹಾಗೂ ಹೇಯ ಕೃತ್ಯವೊಂದು ತಡವಾಗಿ ಬೆಳಕಿಗೆ ಬಂದಿದೆ. ಬಲವಂತವಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಪ್ರಕರಣವನ್ನು ಕಾನೂನುಬಾಹಿರವಾಗಿ ಮುಚ್ಚಿಹಾಕಿದ್ದಲ್ಲದೇ, ಆಕೆಗೆ ಜನಿಸಿದ ನವಜಾತ ಶಿಶುವನ್ನು ಸ್ವತಃ ಖಾಸಗಿ ವೈದ್ಯರೇ ಸೇರಿಕೊಂಡು ಮಾರಾಟ ಮಾಡಿರುವ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾಮುಕ, ಬಾಲಕಿಯ ತಂದೆ-ತಾಯಿ ಹಾಗೂ ಇಬ್ಬರು ಖಾಸಗಿ ವೈದ್ಯರ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಗಂಭೀರ ಮೊಕದ್ದಮೆ ದಾಖಲಾಗಿದೆ.
ದೂರಿನಲ್ಲಿ ಉಲ್ಲೇಖಿಸಲಾದ ವಿವರಗಳ ಪ್ರಕಾರ, ಸದ್ಯ 15 ವರ್ಷ 6 ತಿಂಗಳ ಪ್ರಾಯದ ಅಪ್ರಾಪ್ತ ಬಾಲಕಿಯನ್ನು ಕರೀಂ ಎಂಬ ಆರೋಪಿ ನಯವಂಚಕ ಮಾತುಗಳಿಂದ ಪುಸಲಾಯಿಸಿದ್ದಾನೆ.2025ರ ಜುಲೈ ಮತ್ತು ಆಗಸ್ಟ್ ತಿಂಗಳ ಅವಧಿಯಲ್ಲಿ ಬಾಲಕಿಯನ್ನು ಉಣಕಲ್ಲ ರೈಲ್ವೆ ಬ್ರಿಡ್ಜ್ ಹತ್ತಿರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.
ಈ ದೈಹಿಕ ದೌರ್ಜನ್ಯದಿಂದಾಗಿ ಬಾಲಕಿ ಗರ್ಭಿಣಿಯಾಗಿದ್ದ ವಿಷಯ ಆಕೆಯ ಹೆತ್ತ ತಂದೆ-ತಾಯಿಗೆ ಮುಂಚಿತವಾಗಿಯೇ ತಿಳಿದಿತ್ತು. ಆದರೂ ಅವರು ಪೊಲೀಸರಿಗೆ ಅಥವಾ ಕಾನೂನು ಸಂಸ್ಥೆಗಳಿಗೆ ಮಾಹಿತಿ ನೀಡದೆ ಇಡೀ ಸತ್ಯವನ್ನು ಮರೆಮಾಚಿದ್ದಾರೆ. ಅಷ್ಟೇ ಅಲ್ಲದೆ, ಜನಿಸಿದ ಮಗುವನ್ನು ಬೇರೆಯವರಿಗೆ ಹಸ್ತಾಂತರಿಸಿದ್ದಾರೆ. ಇದೀಗ ಅದೇ ಅಪ್ರಾಪ್ತ ಬಾಲಕಿ ದೌರ್ಜನ್ಯಕ್ಕೆ ಒಳಗಾಗಿ ಮತ್ತೆ ಗರ್ಭಿಣಿಯಾಗಿದ್ದಾಳೆ ಎಂಬ ಆಘಾತಕಾರಿ ಅಂಶ ದೂರಿನಲ್ಲಿ ಬಹಿರಂಗವಾಗಿದೆ.
ಈ ಇಡೀ ಜಾಲದಲ್ಲಿ ಪ್ರಮುಖ ಆರೋಪಿಗಳಾಗಿ ಖಾಸಗಿ ವೈದ್ಯರು ಭಾಗಿಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿಗೆ ಹೆರಿಗೆಯಾಗುವ ಸಮಯದಲ್ಲಿ ಪಾಲಕರಿಂದ ಯಾವುದೇ ಕಾನೂನಾತ್ಮಕ ದಾಖಲಾತಿಗಳನ್ನು ಪಡೆಯದೇ ಈ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಅಲ್ಲದೆ, ನಿಯಮಾವಳಿಗಳ ಪ್ರಕಾರ ಆರೋಗ್ಯ ಇಲಾಖೆಗೆ ಅಥವಾ ಸರ್ಕಾರಿ ಘಟಕಗಳಿಗೆ ಯಾವುದೇ ಮಾಹಿತಿ ನೀಡದೆ ಘೋರ ಅಪರಾಧವನ್ನು ಮುಚ್ಚಿಡಲು ಯತ್ನಿಸಿದ್ದಾರೆ. ಚಳ್ಳಮಟ್ಟಿ ಗ್ರಾಮದ ವೈದ್ಯ ಹಾಗೂ ಹುಬ್ಬಳ್ಳಿ ನಗರದ ಖಾಸಗಿ ಆಸ್ಪತ್ರೆಯ ವೈದ್ಯರು ಸೇರಿಕೊಂಡು ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಧಾರವಾಡದಲ್ಲಿ ಲೇಡಿ ಡಾಕ್ಟರ್‌ನಿಂದಲೇ ಪತಿ ಭೀಕರ ಕೊಲೆ: ಮ್ಯಾಟ್ರಿಮೋನಿ ಮೂಲಕವಾಗಿದ್ದ 2ನೇ ಮದುವೆ ತಂದಿಟ್ಟಿತು ದುರಂತ
ಈ ಭೀಕರ ದಂಧೆ ಮತ್ತು ದೌರ್ಜನ್ಯದ ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಯಾದ ಪ್ರಕಾಶ ಕೊಡ್ಲಿವಾಡ ಅವರು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕೃತ ದೂರು ನೀಡಿದ್ದಾರೆ. ಅಪರಾಧ ಎಸಗಿದ ಕಾಮುಕ ಕರೀಂ, ಕಾನೂನು ಬಾಹಿರವಾಗಿ ವರ್ತಿಸಿದ ಬಾಲಕಿಯ ಪೋಷಕರು ಹಾಗೂ ವೈದ್ಯಕೀಯ ವೃತ್ತಿಗೆ ಕಳಂಕ ತಂದ ಇಬ್ಬರು ಖಾಸಗಿ ವೈದ್ಯರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

