ನವದೆಹಲಿ : ಫ್ರಾನ್ಸ್‌ನ ವಿಮಾನ ತಯಾರಕ ಸಂಸ್ಥೆ ಡಸಾಲ್ಟ್ ಏವಿಯೇಷನ್ ಜೊತೆ ನಡೆಯಲಿರುವ 114 ರಫೇಲ್ ಯುದ್ಧವಿಮಾನಗಳ ಭಾರೀ ಒಪ್ಪಂದಕ್ಕೆ ಭಾರತ ಕಠಿಣ ಮತ್ತು ಸಂಧಾನಕ್ಕೆ ಅವಕಾಶವಿಲ್ಲದ ಷರತ್ತುಗಳನ್ನು ವಿಧಿಸಿದೆ ಎಂದು ಟ್ರಿಬ್ಯೂನ್ ಇಂಡಿಯಾ ವರದಿ ಮಾಡಿದೆ. ಸುಮಾರು ₹3.25 ಲಕ್ಷ ಕೋಟಿ (ಸುಮಾರು 36 ಬಿಲಿಯನ್ ಡಾಲರ್) ಮೌಲ್ಯದ ಈ ಒಪ್ಪಂದದ ಅಡಿಯಲ್ಲಿ ತಯಾರಾಗುವ ಎಲ್ಲ 114 ವಿಮಾನಗಳಲ್ಲೂ ಭಾರತೀಯ ನಿರ್ಮಿತ ಆಯುಧಗಳು, ಕ್ಷಿಪಣಿಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಜೊತೆಗೆ, ಭಾರತೀಯ ರಾಡಾರ್ ಮತ್ತು ಸಂವೇದಕ ವ್ಯವಸ್ಥೆಗಳೊಂದಿಗೆ ವಿಮಾನಗಳನ್ನು ಡಿಜಿಟಲ್ ರೂಪದಲ್ಲಿ ಸಂಪರ್ಕಿಸಲು ಅನುಕೂಲವಾಗುವಂತೆ ಅತ್ಯಂತ ಸುರಕ್ಷಿತ ಡೇಟಾ ಲಿಂಕ್ ವ್ಯವಸ್ಥೆ ಒದಗಿಸುವುದನ್ನೂ ಡಸಾಲ್ಟ್‌ಗೆ ಕಡ್ಡಾಯಗೊಳಿಸಲಾಗಿದೆ.

ಸಾಫ್ಟ್‌ವೇರ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಈ ಎರಡು ಪ್ರಮುಖ ಷರತ್ತುಗಳನ್ನು ಜಾರಿಗೊಳಿಸಲು ರಫೇಲ್ ಯುದ್ಧವಿಮಾನದ ಒಳಗಿರುವ ಕಂಪ್ಯೂಟಿಂಗ್ ಮತ್ತು ಕಮಾಂಡ್ ಸಿಸ್ಟಂ ಸಾಫ್ಟ್‌ವೇರ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಇದರಿಂದ ಆಯುಧ ನಿಯಂತ್ರಣ ಮತ್ತು ಡೇಟಾ ಪ್ರಸರಣ ವ್ಯವಸ್ಥೆ ಸಂಪೂರ್ಣವಾಗಿ ಭಾರತೀಯ ವ್ಯವಸ್ಥೆಗಳೊಂದಿಗೆ ಹೊಂದಾಣಿಕೆಯಾಗಲಿದೆ.
ಇದರ ಜೊತೆ, ತಂತ್ರಜ್ಞಾನ ವರ್ಗಾವಣೆಗೂ ಒಪ್ಪಿಗೆ ನೀಡಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಎಂಜಿನ್ ತಯಾರಕ ಸಫ್ರಾನ್ ಹಾಗೂ ಅವಿಯಾನಿಕ್ಸ್ ಪೂರೈಕೆದಾರ ಥೇಲ್ಸ್ ಸಂಸ್ಥೆಗಳು ಸಹ ಭಾಗವಹಿಸಲಿವೆ.

ರಕ್ಷಣಾ ಸಚಿವಾಲಯವು ವಾಯುಪಡೆಯ ಶಕ್ತಿಯಲ್ಲಿ ಇರುವ ಕೊರತೆಗಳನ್ನು ಭರ್ತಿ ಮಾಡಲು ಸುಮಾರು 8 ಬಿಲಿಯನ್ ಡಾಲರ್ ಮೌಲ್ಯದ ಪ್ರಾಥಮಿಕ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸುವ ನಿರೀಕ್ಷೆಯಿದೆ. ಈ ಯುದ್ಧವಿಮಾನಗಳನ್ನು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಭಾರತದಲ್ಲೇ ತಯಾರಿಸಲಾಗುತ್ತದೆ. ಇದಕ್ಕಾಗಿ ಡಸಾಲ್ಟ್ ಏವಿಯೇಷನ್ ಒಂದು ಭಾರತೀಯ ಕಂಪನಿಯೊಂದಿಗೆ ಪಾಲುದಾರಿಕೆಗೆ ಮುಂದಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಡಸಾಲ್ಟ್ ಸಂಸ್ಥೆ ತನ್ನ ಜಂಟಿ ಉದ್ಯಮವಾದ Dassault Reliance Aerospace Limitedನಲ್ಲಿ ಪಾಲುದಾರಿಕೆಯನ್ನು 49%ರಿಂದ 51%ಕ್ಕೆ ಹೆಚ್ಚಿಸಿಕೊಂಡಿದ್ದು, ಇದರಿಂದ ಅದು ಫ್ರೆಂಚ್ ಕಂಪನಿಯ ಬಹುಮತದ ಅಂಗ ಸಂಸ್ಥೆಯಾಗಿದೆ ಎನ್ನಲಾಗಿದೆ.
ಇನ್ನು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಡಸಾಲ್ಟ್ ಏವಿಯೇಷನ್ ಜೂನ್ 2025ರಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಹೈದರಾಬಾದ್‌ನಲ್ಲಿ ಹೊಸ ಘಟಕದಲ್ಲಿ ರಫೇಲ್ ವಿಮಾನದ ಫ್ಯೂಸೆಲಾಜ್ ಭಾಗಗಳನ್ನು ತಯಾರಿಸಲಾಗುತ್ತದೆ. ಈ ಘಟಕವು 2028–29 ಆರ್ಥಿಕ ವರ್ಷದಿಂದ ಮೊದಲ ಉತ್ಪಾದನೆ ಆರಂಭಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.
ಇದನ್ನೂ ಓದಿ : Iran : ಇರಾನ್ ಪ್ರತಿಭಟನೆ ತಾತ್ಕಾಲಿಕ ಶಮನ: 3000 ಪ್ರತಿಭಟನಾಕಾರರ ಬಂಧನ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

