ವಿಶ್ವಸಂಸ್ಥೆ : ವಿಶ್ವಸಂಸ್ಥೆಯ (UN) ಜಾಗತಿಕ ವೇದಿಕೆಯಲ್ಲಿ ಧರ್ಮ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಅಂತ್ಯಸಂಸ್ಕಾರಗಳ ಬಗ್ಗೆ ಭಾಷಣ ಬಿಗಿಯುತ್ತಿದ್ದ ಪಾಕಿಸ್ತಾನಕ್ಕೆ ಭಾರತವು 1999ರ ಕಾರ್ಗಿಲ್ ಯುದ್ಧದ ಘಟನೆಯನ್ನು ನೆನಪಿಸಿ ತೀವ್ರ ತರಾಟೆಗೆ ತೆಗೆದುಕೊಂಡಿದೆ. “ಕಾರ್ಗಿಲ್ ಸಮರದಲ್ಲಿ ಮಡಿದ ಸ್ವಂತ ದೇಶದ ಯೋಧರ ಮೃತದೇಹಗಳನ್ನೇ ಸ್ವೀಕರಿಸಲು ನಿರಾಕರಿಸಿದ ಪಾಕಿಸ್ತಾನಕ್ಕೆ ಧರ್ಮ ಹಾಗೂ ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ” ಎಂದು ಭಾರತೀಯ ರಾಜತಾಂತ್ರಿಕ ಅಧಿಕಾರಿ ಭಾವಿಕಾ ಮಂಗಲನಂದನ್ ತಿರುಗೇಟು ನೀಡಿದ್ದಾರೆ.
“ಇಸ್ಲಾಮಿಕ್ ಪದ್ಧತಿಯಂತೆ ಪಾಕ್ ಸೈನಿಕರ ಅಂತ್ಯಸಂಸ್ಕಾರ ನಡೆಸಿದ್ದು ಭಾರತೀಯ ಸೇನೆ”:
“1999ರ ಕಾರ್ಗಿಲ್ ಯುದ್ಧದಲ್ಲಿ ಮಡಿದ ತಮ್ಮದೇ ದೇಶದ ಯೋಧರ ಮೃತದೇಹಗಳನ್ನು ಸ್ವೀಕರಿಸಲು ನಿರಾಕರಿಸಿದ ದೇಶವೊಂದು, ಇಂದಿಲ್ಲಿ ಧರ್ಮ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಂತ್ಯಸಂಸ್ಕಾರಗಳ ಕುರಿತು ಉತ್ಸಾಹದಿಂದ ಮಾತನಾಡುತ್ತಿರುವುದು ತೀವ್ರ ವಿಪರ್ಯಾಸದ ಸಂಗತಿಯಾಗಿದೆ. ಕಾರ್ಗಿಲ್‌ನಲ್ಲಿ ಮಡಿದ ಹಲವಾರು ಪಾಕಿಸ್ತಾನಿ ಸೈನಿಕರಿಗೆ ಭಾರತೀಯ ಸೇನೆಯು ಯೋಧರ ಮಿಲಿಟರಿ ಗೌರವಗಳೊಂದಿಗೆ ಮತ್ತು ಪೂರ್ಣ ಇಸ್ಲಾಮಿಕ್ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿತ್ತು ಎಂಬುದನ್ನು ನಾನು ಅವರಿಗೆ ನೆನಪಿಸಲು ಬಯಸುತ್ತೇನೆ” ಎಂದು ವಿಶ್ವಸಂಸ್ಥೆಯಲ್ಲಿ ಪಾಕ್‌ನ ಬೂಟಾಟಿಕೆಯನ್ನು ಬಯಲು ಮಾಡಿದರು.
ಎಕ್ಸ್ ಪೋಸ್ಟ್ ಇಲ್ಲಿದೆ ನೋಡಿ:
“Let me remind Pakistan that it was the Indian Army who buried a number of Pakistani soldiers with military honours and in accordance with Islamic rites,” says Indian diplomat Bhavika Mangalanandan at the UN about the Kargil War https://t.co/4SDN1EgenA
— Shashank Mattoo (@MattooShashank) October 22, 2026
ಜಮ್ಮು ಮತ್ತು ಕಾಶ್ಮೀರದ ಕುರಿತು ಪಾಕಿಸ್ತಾನ ಹೊಂದಿರುವ ತೀವ್ರ ಹಪಹಪಿಕೆ ಹಾಗೂ ‘ಅಬ್ಸೆಷನ್’ ಅನ್ನು ಬಿಟ್ಟು, ತನ್ನ ಅಕ್ರಮ ಆಕ್ರಮಣದಲ್ಲಿರುವ (PoK) ಜಮ್ಮು ಮತ್ತು ಕಾಶ್ಮೀರದ ಭಾಗಗಳಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಭಿವೃದ್ಧಿ ಹಿನ್ನಡೆಯತ್ತ ಗಮನಹರಿಸಲಿ ಎಂದು ಭಾರತ ಎಚ್ಚರಿಸಿದೆ.
ಇದನ್ನೂ ಓದಿ: ಅಮೆರಿಕ-ಪಾಕಿಸ್ತಾನ ಯುದ್ಧ ನಡೆದರೆ ಪಾಕ್ ಪರ ನಿಲ್ಲುತ್ತೇವೆ: ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್ ವಿವಾದಾತ್ಮಕ ಹೇಳಿಕೆ
ಪಾಕಿಸ್ತಾನದ ಸುಳ್ಳಿನ ಕಂತೆ ಬಿಚ್ಚಿಟ್ಟ ಲೋಕಸಭಾ ಸಂಸದೆ ಮಹಿಮಾ ಕುಮಾರಿ ದೇವ್:
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ನಾಲ್ಕನೇ ಸಮಿತಿಯಲ್ಲಿ ಭಾರತದ ಹಕ್ಕುಗಳ ಪ್ರತಿಕ್ರಿಯೆ (Right of Reply) ಮಂಡಿಸಿದ್ದ ಲೋಕಸಭಾ ಸಂಸದೆ ಮಹಿಮಾ ಕುಮಾರಿ ಮೇವಾರ್, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನವು ವಿಶ್ವಸಂಸ್ಥೆಯ ವೇದಿಕೆಯನ್ನು ನಿರಂತರವಾಗಿ ಸುಳ್ಳು ಮತ್ತು ಕಟ್ಟುಕಥೆಗಳನ್ನು ಹರಡಲು ದುರುಪಯೋಗಪಡಿಸಿಕೊಳ್ಳುತ್ತಿರುವುದು ವಿಷಾದಕರ ಎಂದು ಕಿಡಿಕಾರಿದ್ದರು.
“ಕಳೆದ ಕೆಲವು ತಿಂಗಳುಗಳಲ್ಲಿ ಪಾಕಿಸ್ತಾನಿ ಸಶಸ್ತ್ರ ಪಡೆಗಳು ಹಾಗೂ ಅವರ ನೆರಳಿನ ಉಗ್ರರು ತಮ್ಮ ಮೂಲಭೂತ ಹಕ್ಕುಗಳು ಮತ್ತು ಅಗತ್ಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಡಜನ್‌ಗಟ್ಟಲೆ ಮುಗ್ಧ ನಾಗರಿಕರನ್ನು ಕೊಂದಿದ್ದಾರೆ” ಎಂದು ಪಾಕ್ ಮಿಲಿಟರಿಯ ಕ್ರೂರತೆಯನ್ನು ಸಂಸದೆ ಬಯಲಿಗೆಳೆದಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

