AC ಟ್ರೈನ್ ಪ್ರಯಾಣಿಕರ ಕೈಚಳಕ: 4 ವರ್ಷದಲ್ಲಿ 1.27 ಕೋಟಿ ಬೆಡ್‌ಶೀಟ್, ಟವೆಲ್ ಕಳ್ಳತನ; ರೈಲ್ವೆಗೆ 104 ಕೋಟಿ ರೂಪಾಯಿ ನಷ್ಟ

ದೆಹಲಿ: ಭಾರತೀಯ ರೈಲ್ವೆಯ ಹವಾನಿಯಂತ್ರಿತ (AC) ಬೋಗಿಗಳಲ್ಲಿ ಪ್ರತಿ ರಾತ್ರಿ ಸುಮಾರು 8 ಲಕ್ಷ ಪ್ರಯಾಣಿಕರು ರೈಲ್ವೆ ಇಲಾಖೆ ನೀಡುವ ಬೆಡ್‌ರೋಲ್ (ಎರಡು ಬೆಡ್‌ಶೀಟ್, ಒಂದು ಬ್ಲಾಂಕೆಟ್, ಒಂದು ದಿಂಬು, ದಿಂಬಿನ ಕವರ್ ಮತ್ತು ಫೇಸ್ ಟವೆಲ್) ಬಳಸಿ ಮಲಗುತ್ತಾರೆ. ಟಿಕೆಟ್ ದರದಲ್ಲೇ ಈ ಸೌಲಭ್ಯ ಒಳಗೊಂಡಿರುತ್ತದೆ. ಆದರೆ, ಪ್ರಯಾಣ ಮುಗಿಯುತ್ತಿದ್ದಂತೆ ಪ್ರತಿ 1,000 ಪ್ರಯಾಣಿಕರಲ್ಲಿ ಒಬ್ಬರು ಕನಿಷ್ಠ ಒಂದು ಬೆಡ್‌ರೋಲ್ ವಸ್ತುವನ್ನು ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡು ಮನೆಗೆ ಕೊಂಡೊಯ್ಯುತ್ತಿದ್ದಾರೆ!

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯು ಮಾಹಿತಿ ಹಕ್ಕು ಕಾಯ್ದೆಯಡಿ (RTI) ದೇಶದ ಎಲ್ಲಾ 69 ರೈಲ್ವೆ ವಿಭಾಗಗಳಲ್ಲಿ ಸಲ್ಲಿಸಿದ್ದ ಅರ್ಜಿಗೆ ಲಭ್ಯವಾಗಿರುವ ಅಧಿಕೃತ ದತ್ತಾಂಶಗಳಿಂದ ಈ ಆಘಾತಕಾರಿ ಸತ್ಯ ಬಯಲಾಗಿದೆ.

4 ವರ್ಷಗಳಲ್ಲಿ ಶೇ. 56 ರಷ್ಟು ಹೆಚ್ಚಾದ ಕಳ್ಳತನ:

ಕೋವಿಡ್ ಸಾಂಕ್ರಾಮಿಕದ ನಂತರ ಅಂದರೆ ಜನವರಿ 2022 ರಿಂದ ಮೇ 2026 ರವರೆಗಿನ ಅವಧಿಯಲ್ಲಿ, ರೈಲ್ವೆ ಇಲಾಖೆಯಿಂದ ಬರೋಬ್ಬರಿ 1.27 ಕೋಟಿ ಬೆಡ್‌ರೋಲ್ ವಸ್ತುಗಳು ಕಳ್ಳತನವಾಗಿವೆ! ಇವುಗಳನ್ನು ಮುಖ್ಯವಾಗಿ ಪ್ರಯಾಣಿಕರೇ ಕದ್ದೊಯ್ದಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಕಳ್ಳತನದ ಪ್ರಮಾಣ ಹೆಚ್ಚುತ್ತಲೇ ಸಾಗಿದ್ದು, 2022 ರಿಂದ 2025 ರ ಅವಧಿಯಲ್ಲಿ ಶೇ. 56 ರಷ್ಟು ಏರಿಕೆ ಕಂಡಿದೆ. ಬೃಹತ್ ರೈಲ್ವೆ ಜಾಲಕ್ಕೆ ಹೋಲಿಸಿದರೆ ಇದು ಸಣ್ಣ ಪ್ರಮಾಣದಂತೆ ಕಂಡರೂ, ಈ ಅಂಕಿ-ಅಂಶಗಳು ಪ್ರಯಾಣಿಕರ ನಡವಳಿಕೆ ಮತ್ತು ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ಗುತ್ತಿಗೆದಾರರಿಗೆ ರೂ. 104 ಕೋಟಿ ನಷ್ಟ

ಈ ನಿರಂತರ ಕಳ್ಳತನದಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಬೆಡ್‌ರೋಲ್ ಪೂರೈಸುವ ಗುತ್ತಿಗೆದಾರರಿಗೆ ಬರೋಬ್ಬರಿ 104.51 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಆರ್‌ಟಿಐ ಅಂಕಿ-ಅಂಶಗಳು ತಿಳಿಸಿವೆ. ರೈಲಿನಲ್ಲಿ ಹಾಸಿಗೆಗಳನ್ನು ನಿರ್ವಹಿಸುವ ಕೋಚ್ ಅಟೆಂಡೆಂಟ್‌ಗಳು (ರೈಲ್ವೆ ಸಿಬ್ಬಂದಿ) ಹೇಳುವ ಪ್ರಕಾರ, ಈ ಕಳ್ಳತನದ ನಷ್ಟದ ಬಹುಪಾಲು ಹಣವನ್ನು ಅವರ ಅತ್ಯಲ್ಪ ಸಂಬಳದಿಂದಲೇ ಕಡಿತಗೊಳಿಸಿ ವಸೂಲಿ ಮಾಡಲಾಗುತ್ತಿದೆ. ಇದು ಬಡ ಕಾರ್ಮಿಕರಿಗೆ ಭಾರಿ ಹೊರೆಯಾಗಿ ಪರಿಣಮಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಸಚಿವಾಲಯದ ವಕ್ತಾರರು, “ಇದು ಅತ್ಯಂತ ಗಂಭೀರವಾದ ಕಳವಳಕಾರಿ ವಿಷಯವಾಗಿದ್ದು, ಕಳ್ಳತನ ತಡೆಯಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುತ್ತಿದೆ,” ಎಂದಿದ್ದಾರೆ. ಆದರೆ ಈ ಕಳ್ಳತನದಲ್ಲಿ ರೈಲ್ವೆ ಸಿಬ್ಬಂದಿಯ ಶಾಮೀಲಾತಿ ಇರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾಲ್ಕು ವರ್ಷಗಳಲ್ಲಿ ಕದ್ದೊಯ್ಯಲಾದ ಒಟ್ಟು 1.27 ಕೋಟಿ ವಸ್ತುಗಳ ಪೈಕಿ ಇಲಾಖೆ ನೀಡಿರುವ ವಿವರ ಹೀಗಿದೆ

ಫೇಸ್ ಟವೆಲ್‌ಗಳು (ಮೊದಲ ಸ್ಥಾನ): ಬ್ಯಾಗ್‌ನಲ್ಲಿ ಸುಲಭವಾಗಿ ಬಚ್ಚಿಟ್ಟುಕೊಳ್ಳಬಹುದಾದ ಮುಖ ಒರೆಸುವ ಸಣ್ಣ ಟವೆಲ್‌ಗಳೇ ಅತಿ ಹೆಚ್ಚು ಕಳ್ಳತನವಾಗಿವೆ (ಬರೋಬ್ಬರಿ 46.54 ಲಕ್ಷ ಟವೆಲ್‌ಗಳು ಗಾಯಬ್!).

ಬೆಡ್‌ಶೀಟ್‌ಗಳು: 41.13 ಲಕ್ಷ ಹಾಸಿಗೆ .

ದಿಂಬಿನ ಕವರ್‌ಗಳು: 23.59 ಲಕ್ಷ.

ಬ್ಲಾಂಕೆಟ್‌ಗಳು (ಕಂಬಳಿ): 12.95 ಲಕ್ಷ .

ದಿಂಬುಗಳು: 2.76 ಲಕ್ಷ .

ಇದನ್ನೂ ಓದಿ: ಮುಂಬೈ ಮಹಾಮಳೆಗೆ ರೈಲ್ವೆ ಹಳಿಗಳೇ ‘ಅಕ್ವೇರಿಯಂ’!: ಹಳಿಗಳ ಮೇಲೆ ಈಜಾಡುತ್ತಿವೆ ಜೀವಂತ ಮೀನುಗಳು
ಕಳ್ಳತನ ಹೆಚ್ಚಿರುವ ದೇಶದ ಪ್ರಮುಖ 10 ರೈಲ್ವೆ ವಿಭಾಗಗಳು

ಬಿಕಾನೇರ್, ಜೋಧ್‌ಪುರ ಮತ್ತು ಜೈಪುರ (ರಾಜಸ್ಥಾನ ವ್ಯಾಪ್ತಿ)

ದೆಹಲಿ

ಮುಂಬೈ

ಅಹಮದಾಬಾದ್

ರಾಂಚಿ

ಸೋನಾಪುರ ಮತ್ತು ದಾನಾಪುರ (ಬಿಹಾರ ವ್ಯಾಪ್ತಿ)

ಬಿಲಾಸ್ಪುರ

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *