ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಕನ್’ ರಿಲೀಸ್ ಡೇಟ್ ಫಿಕ್ಸ್: ಸೆನ್ಸಾರ್ ಮಂಡಳಿಯಿಂದ 12 ಕಟ್‌ಗಳೊಂದಿಗೆ ‘A’ ಪ್ರಮಾಣಪತ್ರ

ಚೆನ್ನೈ: ಕಾಲಿವುಡ್ ಸೂಪರ್‌ಸ್ಟಾರ್ ಹಾಗೂ ರಾಜಕೀಯ ನಾಯಕ ದಳಪತಿ ವಿಜಯ್ ಅವರ ಚಿತ್ರರಂಗದ ವಿದಾಯದ ಸಿನಿಮಾ (Swansong) ‘ಜನ ನಾಯಕನ್’ ಕೊನೆಗೂ ಬಿಡುಗಡೆಗೆ ದಿನಾಂಕ ನಿಗದಿಪಡಿಸಿಕೊಂಡಿದೆ. ಕಳೆದ 7 ತಿಂಗಳುಗಳಿಂದ ಸೆನ್ಸಾರ್ ಮಂಡಳಿಯ ತಗಾದೆಯಿಂದಾಗಿ ತಡವಾಗಿದ್ದ ಈ ಚಿತ್ರ ಜುಲೈ 24 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ.

ಇದರ ನಡುವೆ, ಬ್ರಿಟನ್‌ನಲ್ಲಿ (UK) ಚಿತ್ರವನ್ನು ಯಾವುದೇ ಕಟ್‌ಗಳಿಲ್ಲದೆ ಸಂಪೂರ್ಣವಾಗಿ ಪ್ರದರ್ಶಿಸಲಾಗುವುದು ಎಂದು ಯುಕೆ ವಿತರಕ ಸಂಸ್ಥೆಯಾದ ‘ಅಹಿಂಸಾ ಎಂಟರ್‌ಟೈನ್‌ಮೆಂಟ್’ ಖಚಿತಪಡಿಸಿದೆ.

ಚಿತ್ರದ ಬಿಡುಗಡೆ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಅಹಿಂಸಾ ಎಂಟರ್‌ಟೈನ್‌ಮೆಂಟ್, “ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್… ಜನ ನಾಯಕನ್ ಚಿತ್ರ ಜುಲೈ 24 ರಿಂದ ಯುಕೆ ಚಿತ್ರಮಂದಿರಗಳಲ್ಲಿ ಯಾವುದೇ ಕಟ್‌ಗಳಿಲ್ಲದೆ 15+ ರೇಟಿಂಗ್‌ನೊಂದಿಗೆ ಪ್ರದರ್ಶನಗೊಳ್ಳಲಿದೆ. ಪಕ್ಕಾ ಆಕ್ಷನ್, ಮಾಸ್ ಹಾಗೂ ದಳಪತಿ ಕ್ರೇಜ್ ಅನ್ನು ಪ್ರೇಕ್ಷಕರು ಹೇಗೆ ನೋಡಬೇಕಿತ್ತೋ ಹಾಗೇ ಕಣ್ಣುಂಬಿಕೊಳ್ಳಬಹುದು. ಕೊನೆಯ ಒಂದು ಬಾರಿ,” ಎಂದು ಬರೆದುಕೊಂಡಿದೆ.

ಯುಕೆನಲ್ಲಿ ಚಿತ್ರದ ಅಡ್ವಾನ್ಸ್ ಬುಕಿಂಗ್ ಆರಂಭವಾದ ಕೇವಲ 1 ಗಂಟೆಯೊಳಗೆ ಸಾವಿರಾರು ಟಿಕೆಟ್‌ಗಳು ಮಾರಾಟವಾಗಿವೆ ಎಂದು ವಿತರಕರು ತಿಳಿಸಿದ್ದಾರೆ. “ಇದು ಕೇವಲ ಸಿನಿಮಾ ಅಲ್ಲ, ನಮಗೆ ಎಲ್ಲವನ್ನೂ ನೀಡಿದ ಮಹಾನಾಯಕನಿಗೆ ಅಭಿಮಾನಿಗಳು ನೀಡುತ್ತಿರುವ ಭಾವನಾತ್ಮಕ ವಿದಾಯ. ತಮಿಳು ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ಸೆಂಡ್-ಆಫ್ ಇದಾಗಲಿದೆ,” ಎಂದು ಸಂಸ್ಥೆ ಭಾವುಕವಾಗಿ ಹೇಳಿದೆ.

ಭಾರತದಲ್ಲಿ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯಿಂದ ಈ ಚಿತ್ರಕ್ಕೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆರಂಭದಲ್ಲಿ ಜನವರಿ ತಿಂಗಳಲ್ಲೇ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಸೆನ್ಸಾರ್ ಮಂಡಳಿಯ ತೀವ್ರ ಆಕ್ಷೇಪಣೆಗಳಿಂದಾಗಿ ಹಲವು ತಿಂಗಳುಗಳ ಕಾಲ ನನೆಗುದಿಗೆ ಬಿದ್ದಿತ್ತು. ಇದರ ಬೆನ್ನಲ್ಲೇ ಚಿತ್ರದ ಲೀಕ್ಡ್ ವರ್ಷನ್ ಆನ್‌ಲೈನ್‌ನಲ್ಲಿ ಹರಿದಾಡಿದ್ದು ಚಿತ್ರತಂಡಕ್ಕೆ ಮತ್ತೊಂದು ತಲೆನೋವಾಗಿತ್ತು.

ಪ್ರಸ್ತುತ, ಚಿತ್ರದಲ್ಲಿರುವ ಪ್ರಮುಖ ರಾಜಕೀಯ ಸಂಭಾಷಣೆಗಳು ಹಾಗೂ ಕೆಲವು ಸೂಕ್ಷ್ಮ ದೃಶ್ಯಗಳು ಸೇರಿದಂತೆ ಬರೋಬ್ಬರಿ 12 ಕಟ್‌ಗಳನ್ನು ಮಾಡಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಈ ಎಲ್ಲಾ ಬದಲಾವಣೆಗಳ ಬಳಿಕ ಚಿತ್ರಕ್ಕೆ ‘A’ ಪ್ರಮಾಣಪತ್ರ ನೀಡಲಾಗಿದ್ದು, ಭಾರತದಲ್ಲಿ ಕಟೌಟ್ ದೃಶ್ಯಗಳೊಂದಿಗೆ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ; ನವಿಲುಗರಿ ವಿವಾದ ಸೈಡಿಗೆ, ಹೊಸ ರೀಲ್ಸ್‌ನಲ್ಲಿ ನಿವೇದಿತಾ ಗೌಡ ಹವಾ: ರಸ್ತೆ ಪಕ್ಕದಲ್ಲೇ ನಿಂತು ಹಸುವಿನ ಹಾಲು ಕರೆದ ಬಿಗ್‌ಬಾಸ್ ಸುಂದರಿ; 2 ಗಂಟೆಯಲ್ಲೇ ಲಕ್ಷಾಂತರ ವೀಕ್ಷಣೆ

ಖ್ಯಾತ ನಿರ್ದೇಶಕ ಎಚ್. ವಿನೋತ್ ನಿರ್ದೇಶನದ, ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಜನ ನಾಯಕನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ನರೇನ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಜಯ್ ಪೂರ್ಣ ಪ್ರಮಾಣದ ರಾಜಕೀಯಕ್ಕೆ ಧುಮುಕುವ ಮುನ್ನ ನಟಿಸಿರುವ ಕೊನೆಯ ಸಿನಿಮಾ ಇದಾಗಿರುವುದರಿಂದ ಜಾಗತಿಕ ಮಟ್ಟದಲ್ಲಿ ಭಾರಿ ಹೈಪ್ ಸೃಷ್ಟಿಯಾಗಿದೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *