ಬಿಡದಿ ಟೌನ್‌ಶಿಪ್ ಸರ್ವೆ ಮಾಡುವ ವೇಳೆ ಸಿಡಿದೆದ್ದ ಮಂಡಲಹಳ್ಳಿ ರೈತರು; ಅಧಿಕಾರಿಗಳಿಗೆ ಮಹಿಳೆಯರಿಂದ ಪೊರಕೆ ಸೇವೆ, ಕಾರುಗಳು ಜಖಂ

ರಾಮನಗರ: ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ (Bidadi Township) ಯೋಜನೆಗೆ ಭೂಮಿ ನೀಡಲು ನಿರಾಕರಿಸುತ್ತಿರುವ ರೈತರ ಹೋರಾಟ ಈಗ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ರೈತರ ತೀವ್ರ ವಿರೋಧದ ನಡುವೆಯೂ ಇಂದು (ಜುಲೈ 13) ಜಂಟಿ ಅಳತೆ ಕಾರ್ಯಕ್ಕೆ (JMC) ಮುಂದಾದ ಅಧಿಕಾರಿಗಳ ವಿರುದ್ಧ ರಾಮನಗರ ತಾಲೂಕಿನ ಮಂಡಲಹಳ್ಳಿ ಗ್ರಾಮಸ್ಥರು ಉಗ್ರ ರೂಪದಲ್ಲಿ ಸಿಡಿದೆದ್ದಿದ್ದಾರೆ. ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆಯಿಂದ ಹಿಗ್ಗಾಮುಗ್ಗಾ ತಳಿಸಿದ್ದು, ಅಧಿಕಾರಿಗಳ ಎರಡು ಸರ್ಕಾರಿ ಕಾರುಗಳನ್ನು ಜಖಂಗೊಳಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರು ಆರಂಭದಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು, ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. “ನಮ್ಮ ಜೀವ ಹೋದರೂ ಕೃಷಿ ಭೂಮಿಯನ್ನು ಯೋಜನೆಗೆ ನೀಡುವುದಿಲ್ಲ” ಎಂದು ರೈತರು ಪಟ್ಟು ಹಿಡಿದಿದ್ದಾರೆ. ಹೀಗಿದ್ದರೂ, ರೈತರ ಹೋರಾಟವನ್ನು ನಿರ್ಲಕ್ಷಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ರಾಮನಗರ ತಾಲೂಕಿನ ಮಂಡಲಹಳ್ಳಿ ಗ್ರಾಮಕ್ಕೆ ಅಧಿಕಾರಿಗಳ ತಂಡ ಇಂದು ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸರ್ವೆ ಕಾರ್ಯ ನಡೆಸಲು ಆಗಮಿಸಿತ್ತು. ಇದು ಗ್ರಾಮಸ್ಥರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.

ಅಧಿಕಾರಿಗಳು ಜಂಟಿ ಅಳತೆ ಕಾರ್ಯಕ್ಕೆ ಮುಂದಾಗುತ್ತಿದ್ದಂತೆ ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ಮತ್ತು ಮಹಿಳೆಯರು ಅಧಿಕಾರಿಗಳನ್ನು ಸುತ್ತುವರಿದರು. ಯಾವುದೇ ಎಚ್ಚರಿಕೆಯನ್ನು ಆಲಿಸದ ಮಹಿಳಾ ಪ್ರತಿಭಟನಾಕಾರರು ತಾವೇ ಖುದ್ದಾಗಿ ಮುಂದೆ ಬಂದು ಸರ್ವೆ ಅಧಿಕಾರಿಗಳಿಗೆ ಪೊರಕೆಯಿಂದ ಹಿಗ್ಗಾಮುಗ್ಗಾ ಥಳಿಸಿದರು. ಆಕ್ರೋಶ ತಡೆಯಲಾರದೆ ರೈತರು ಅಲ್ಲೇ ರಸ್ತೆಯಲ್ಲಿದ್ದ ಇಟ್ಟಿಗೆ ಮತ್ತು ಕಲ್ಲುಗಳನ್ನು ತಂದು ಅಧಿಕಾರಿಗಳು ಬಂದಿದ್ದ ಎರಡು ಕಾರುಗಳ ಮೇಲೆ ಎಸೆದಿದ್ದಾರೆ. ಕಲ್ಲು ತೂರಾಟದ ಭೀಕರತೆಗೆ ಕಾರುಗಳ ಮುಂಭಾಗದ ಗಾಜುಗಳು ಸಂಪೂರ್ಣ ಪುಡಿಪುಡಿಯಾಗಿದ್ದು, ವಾಹನಗಳು ಜಖಂಗೊಂಡಿವೆ.

ಇದನ್ನೂ ಓದಿ: ಮದುವೆ ನಿರಾಕರಿಸಿದ ಪ್ರಿಯಕರನಿಗೆ ಚಾಕು ಇರಿದ ಪ್ರೇಯಸಿ: ಬಿಡದಿಯಲ್ಲಿ ಜಿಮ್ ಟ್ರೈನರ್ ಮೇಲೆ ಭೀಕರ ದಾಳಿ!

ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದಾಗ ಪೊಲೀಸರು ಮತ್ತು ರೈತ ಮುಖಂಡರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ನೂಕಾಟ-ತಳ್ಳಾಟ ನಡೆಯಿತು. “ಯಾವುದೇ ಕಾರಣಕ್ಕೂ ನಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ನಡೆಸಲು ಬಿಡುವುದಿಲ್ಲ” ಎಂದು ರೈತರು ಜಾಗ ಖಾಲಿ ಮಾಡುವಂತೆ ಅಧಿಕಾರಿಗಳಿಗೆ ಸವಾಲು ಹಾಕಿದರು. ಸದ್ಯ ಮಂಡಲಹಳ್ಳಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಹೊಚ್ಚ ಹೊಸದಾಗಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *