IPL: KKR ವಿರುದ್ಧ ರೋಚಕ ಗೆಲುವು ಸಾಧಿಸಿದ SRH

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 6ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡವು ಕೊಲ್ಕತ್ತ ನೈಟ್‌ರೈಡರ್ಸ್ (ಕೆಕೆಆರ್) ವಿರುದ್ಧ 65 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 226 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ತಂಡದ ಪರ ಟ್ರಾವಿಸ್ ಹೆಡ್ 21 ಎಸೆತಗಳಲ್ಲಿ 46 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 48 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು.

ಹೆನ್ರಿಕ್ ಕ್ಲಾಸೆನ್ 35 ಎಸೆತಗಳಲ್ಲಿ 52 ರನ್‌ಗಳೊಂದಿಗೆ ಅರ್ಧಶತಕ ಪೂರೈಸಿದರು. ಉಳಿದಂತೆ ನಿತೀಶ್ ಕುಮಾರ್ ರೆಡ್ಡಿ 39 ರನ್, ಇಶಾನ್ ಕಿಶನ್ 14 ರನ್ ಗಳಿಸಿದರೆ, ಹರ್ಷ್ ದುಬೆ 9 ರನ್‌ಗಳೊಂದಿಗೆ ಅಜೇಯರಾಗಿದ್ದರು. ಅನಿಕೇತ್ ವರ್ಮಾ 1, ಶಿವಾಂಗ್ ಕುಮಾರ್ 4 ರನ್ ಗಳಿಸಿದರೆ, ಸಲೀಲ್ ಅರೋರಾ ಶೂನ್ಯಕ್ಕೆ ಔಟಾದರು.

ಇದನ್ನೂ ಓದಿ: IPL: ಸಮೀರ್ ರಿಜ್ವಿ ಏಕಾಂಗಿ ಹೋರಾಟ: ಲಕ್ನೋ ವಿರುದ್ಧ ಡೆಲ್ಲಿಗೆ ರೋಚಕ ಜಯ

ಕೆಕೆಆರ್ ಪರ ಬೌಲಿಂಗ್‌ನಲ್ಲಿ ಬ್ಲೆಸ್ಸಿಂಗ್ ಮುಜರಾಬಾನಿ 4 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರೆ, ವೈಭವ್ ಅರೋರಾ 2 ವಿಕೆಟ್ ಪಡೆದರು. ಕಾರ್ತಿಕ್ ತ್ಯಾಗಿ ಹಾಗೂ ಅನುಕೂಲ್ ರಾಯ್ ತಲಾ 1 ವಿಕೆಟ್ ಪಡೆದರು.

227 ರನ್‌ಗಳ ಕಠಿಣ ಗೆಲುವಿನ ಗುರಿ ಬೆನ್ನತ್ತಿದ ಕೆಕೆಆರ್ ತಂಡವು 16 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 161 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಅಂಗ್‌ಕ್ರಿಶ್ ರಘುವಂಶಿ 29 ಎಸೆತಗಳಲ್ಲಿ 52 ರನ್‌ಗಳೊಂದಿಗೆ ಅರ್ಧಶತಕ ಸಿಡಿಸಿದರೆ, ರಿಂಕು ಸಿಂಗ್ 35 ರನ್ ಗಳಿಸಿ ಹೋರಾಟ ನಡೆಸಿದರು.

ಫಿನ್ ಅಲೆನ್ 28, ಸುನಿಲ್ ನರೈನ್ 12, ರಮಣದೀಪ್ ಸಿಂಗ್ 10, ಅಜೆಂಕ್ಯ ರಹಾನೆ 8 ರನ್ ಗಳಿಸಿದರು. ಕ್ಯಾಮೆರಾನ್ ಗ್ರೀನ್ 2, ಕಾರ್ತಿಕ್ ತ್ಯಾಗಿ 5 ರನ್ ಗಳಿಸಿದರೆ, ವೈಭವ್ ಅರೋರಾ 1 ರನ್‌ನೊಂದಿಗೆ ಅಜೇಯರಾಗಿದ್ದರು. ವರುಣ್ ಚಕ್ರವರ್ತಿ ಹಾಗೂ ಅನುಕೂಲ್ ರಾಯ್ ಶೂನ್ಯಕ್ಕೆ ಔಟಾದರು.

ಎಸ್‌ಆರ್‌ಎಚ್ ಪರ ಬೌಲಿಂಗ್‌ನಲ್ಲಿ ಜಯದೇವ್ ಉನದ್ಕತ್ 3 ವಿಕೆಟ್ ಪಡೆದರೆ, ನಿತೀಶ್ ಕುಮಾರ್ ರೆಡ್ಡಿ ಹಾಗೂ ಈಶಾನ್ ಮಾಲಿಂಗ ತಲಾ 2 ವಿಕೆಟ್ ಕಬಳಿಸಿದರು. ಹರ್ಷ್ ದುಬೆ 1 ವಿಕೆಟ್ ಪಡೆದರು.

ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನದೊಂದಿಗೆ ಕೆಕೆಆರ್ ವಿರುದ್ಧ 65 ರನ್‌ಗಳ ರೋಚಕ ಜಯ ದಾಖಲಿಸಿತು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ