ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 16ನೇ ಪಂದ್ಯದಲ್ಲಿ ರಾಯಸ್ಥಾನ ರಾಯಲ್ಸ್ (ಆರ್‌ಆರ್) ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 201 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ರಜತ್ ಪಾಟಿದಾರ್ 63 ರನ್‌ಗಳೊಂದಿಗೆ ಅಗ್ರ ಸ್ಕೋರರ್ ಆಗಿ ಮಿಂಚಿದರು. ವಿರಾಟ್ ಕೊಹ್ಲಿ 32 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ 29 ರನ್‌ಗಳೊಂದಿಗೆ ಅಜೇಯರಾಗಿದ್ದರು. ರೋಮಾರಿಯೊ ಶೆಫರ್ಡ್ 22 ಹಾಗೂ ಟಿಮ್ ಡೇವಿಡ್ 13 ರನ್ ಸೇರಿಸಿದರು. ಫಿಲ್ ಸಾಲ್ಟ್ ಶೂನ್ಯಕ್ಕೆ ಔಟಾದರು.

ಬೌಲಿಂಗ್ ವಿಭಾಗದಲ್ಲಿ ಆರ್‌ಆರ್ ಪರ ಬ್ರಿಜೇಶ್ ಶರ್ಮಾ, ರವಿ ಬಿಷ್ಣೋಯಿ ಮತ್ತು ಜೋಫ್ರಾ ಆರ್ಚರ್ ತಲಾ 2 ವಿಕೆಟ್ ಪಡೆದರು. ರವೀಂದ್ರ ಜಡೆಜಾ ಹಾಗೂ ಸಂದೀಪ್ ಶರ್ಮಾ ತಲಾ 1 ವಿಕೆಟ್ ಕಬಳಿಸಿದರು.
202 ರನ್‌ಗಳ ಗುರಿ ಬೆನ್ನತ್ತಿದ ರಾಯಸ್ಥಾನ ರಾಯಲ್ಸ್ 18 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು.

ಇದನ್ನೂ ಓದಿ: IPL: ಮುಂಬೈ ವಿರುದ್ಧ ಜೈಸ್ವಾಲ್ ಮಿಂಚಿನಾಟ; ರಾಜಸ್ಥಾನಕ್ಕೆ ರಾಯಲ್ ಗೆಲುವು
ಈ ಗೆಲುವಿನ ಹೀರೋ ಆಗಿ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಮಿಂಚಿದರು. ಅವರು ಕೇವಲ 26 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್‌ಗಳೊಂದಿಗೆ 78 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

ಇನ್ನೊಬ್ಬ ನಿರ್ಣಾಯಕ ಆಟಗಾರ ಧ್ರುವ್ ಜುರೆಲ್ 43 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳೊಂದಿಗೆ 81 ರನ್‌ಗಳನ್ನು ಗಳಿಸಿ ಅಜೇಯವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಯಶಸ್ವಿ ಜೈಸ್ವಾಲ್ 13 ರನ್ ಗಳಿಸಿದರೆ, ರವೀಂದ್ರ ಜಡೇಜಾ 24 ರನ್‌ಗಳೊಂದಿಗೆ ಅಜೇಯರಾಗಿದ್ದರು. ಶಿಮ್ರಾನ್ ಹೆಟ್ಮೆಯರ್ ಶೂನ್ಯಕ್ಕೆ ಔಟಾದರು.
ಆರ್‌ಸಿಬಿ ಪರ ಜೋಶ್ ಹ್ಯಾಜಲ್ವುಡ್ ಹಾಗೂ ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

