ರಾಯಿಪುರ್: ಇಶನ್ ಕಿಶನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ನೆರವಿನಿಂದ ಭಾರತ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯಾಟದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ರಾಯಿಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂ ನಲ್ಲಿ ನಡೆದ ಎರಡನೇ ಟಿ-20 ಪಂದ್ಯಾಟದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ನ್ಯೂಜಿಲೆಂಡ್ ತಂಡಕ್ಕೆ ಬ್ಯಾಟಿಂಗ್ ನೀಡಿತು.

ನ್ಯೂಜಿಲೆಂಡ್ ಪರ ನಾಯಕ ಮಿಚೆಲ್ ಸ್ಯಾಂಟ್ನರ್ ಅಜೇಯ 47, ರಚಿನ್ ರವೀಂದ್ರ 44, ಟಿಂ ಸೈಫ್ರೆಟ್ 24, ಗ್ಲೆನ್ ಫಿಲಿಪ್ಸ್ ಮತ್ತು ಡೇವನ್ ಕಾನ್ವೆ ತಲಾ 19, ಡೆರೈಲ್ ಮಿಚೆಲ್ 18, ಝಕರಿ ಫೋಲ್ಸ್ 15 ಮತ್ತು ಮಾರ್ಕ್ ಚಾಪ್ಮನ್ 10 ರನ್ ಸಹಾಯದೊಂದಿಗೆ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು.
ಭಾರತ ಪರ ಕುಲ್ದೀಪ್ ಯಾದವ್ 2 ವಿಕೆಟ್ ಮತ್ತು ವರುಣ್ ಚಕ್ರವರ್ತಿ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮತ್ತು ಹರ್ಷಿತ್ ರಾಣಾ ತಲಾ ಒಂದು ವಿಕೆಟ್ ಪಡೆದರು.

209 ರನ್ ಗುರಿ ಬೆನ್ನತ್ತಿದ ಭಾರತ ಡ್ಯಾಷಿಂಗ್ ಓಪನರ್ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್‌ಸನ್ ಅವರನ್ನು ಬೇಗನೇ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇದನ್ನೂ ಓದಿ: ಹುಬ್ಬಳ್ಳಿ: ಬೆಂಕಿಗಾಹುತಿಯಾದ ಮೆಟ್ರೋ ಕಾಂಪ್ಲೆಕ್ಸ್
ನಂತರ ಬಂದ ಇಶನ್ ಕಿಶನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಶತಕದ ಜೊತೆಯಾಟ ಆಡಿ ಗೆಲುವಿನ ಸಮೀಪಕ್ಕೆ ಕೊಂಡೊಯ್ದರು.
ಸ್ಪೋಟಕ ಇನ್ನಿಂಗ್ಸ್ ಕಟ್ಟಿದ ಇಶನ್ 32 ಎಸೆತಗಳಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 76 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು.
ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯಕುಮಾರ್ ನಂತರ ತಮ್ಮ ಗತವೈಭವಕ್ಕೆ ಮರಳಿದರು. 37 ಎಸೆತಗಳಲ್ಲಿ 9 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ ಅಜೇಯ 82 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕೊನೆಯಲ್ಲಿ ಜೊತೆಯಾದ ಶಿವಂ ದುಬೆ 36 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.
ಭಾರತ ಇನ್ನು 28 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದು ಬೀಗಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಕಾಯ್ದುಕೊಂಡಿದೆ.
ಮುಂದಿನ ಪಂದ್ಯಾಟ 25 ರಂದು ಗುವಾಹಟಿಯಲ್ಲಿ ನಡೆಯಲಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

