Breaking News

ನನ್ನ ಮೇಲೆ 110 ಕೇಸ್​​ ಇದೆ ಇದ್ಯಾವ ಲೆಕ್ಕ; ನಾನು ಭರತ್ ಜೊತೆ ಫೋನ್‌ನಲ್ಲಿ ಮಾತನಾಡಿರುವುದು ನಿಜ ಎಂದ ಕಲ್ಲಡ್ಕ ಪ್ರಭಾಕರ್ ಭಟ್

ಬಂಟ್ವಾಳ : ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ತಮಗೆ ನೀಡಿರುವ ನೋಟಿಸ್ ಹಾಗೂ ತನಿಖೆಗೆ ಹಾಜರಾಗುವಂತೆ ಸೂಚಿಸಿರುವುದಕ್ಕೆ ಆರ್‌ಎಸ್‌ಎಸ್ (RSS) ಹಿರಿಯ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ನೋಟಿಸ್ ನೀಡಿದಾಕ್ಷಣ ಹೆದರುವುದಿಲ್ಲ ಎಂದಿರುವ ಅವರು, ತಾವು ಆರೋಪಿಯೊಂದಿಗೆ ಕೇವಲ ಫೋನ್‌ನಲ್ಲಿ ಮಾತನಾಡಿದ್ದೇನೆಯೇ ಹೊರತು ಯಾವುದೇ ಹತ್ಯೆ ಅಥವಾ ದಾಳಿಗೆ ಪ್ರಚೋದನೆ ನೀಡಿಲ್ಲ. ನನ್ನ ಮೇಲೆ 110 ಕೇಸ್​​ ಇದೆ ಇದ್ಯಾವ ಲೆಕ್ಕ, ನಾನು ಇದಕ್ಕೆಲ್ಲ ಭಯಪಡುವುದಿಲ್ಲ ಎಂದು ಹೇಳಿದರು.

ಬಂಟ್ವಾಳದಲ್ಲಿ ಮಾಧ್ಯಮಗಳೊಂದಿಗೆ ಹಾಗೂ ‘ಬಿ.ಸಿ. ರೋಡ್ ಚಲೋ’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಪೋಲಿಸ್ ಇಲಾಖೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹತ್ಯೆ ಪ್ರಕರಣದ ಆರೋಪಿ ಭರತ್ ಕುಮ್ಡೇಲು ಜೊತೆಗಿನ ಫೋನ್ ಸಂಭಾಷಣೆ ಕುರಿತು ಪ್ರತಿಕ್ರಿಯಿಸಿದ ಕಲ್ಲಡ್ಕ ಭಟ್, “ನಾನು ಭರತ್ ಜೊತೆ ಫೋನ್‌ನಲ್ಲಿ ಮಾತನಾಡಿರುವುದು ನಿಜ. ಆದರೆ ಯಾರಿಗಾದರೂ ದಾಳಿ ಮಾಡಿ ಅಥವಾ ಕೊಲೆ ಮಾಡಿ ಎಂದು ಹೇಳಿದ್ದೇನೆಯೇ? ನನ್ನ ಸಂಭಾಷಣೆಯ ಆಡಿಯೋ ರೆಕಾರ್ಡಿಂಗ್ ಪೊಲೀಸರ ಬಳಿಯೇ ಇದೆ. ಅದರಲ್ಲಿ ಏನಿದೆ ಎಂದು ಅವರಿಗೆ ಗೊತ್ತಿಲ್ವೇ? ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ನಾನು ಮಾತನಾಡಿದ್ದೇನೆ” ಎಂದು ಹೇಳಿದರು.

“ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದ ಕಾರ್ಯಕರ್ತರ ಮೇಲೆ ಗೂಂಡಾ ಕಾಯಿದೆ ಹೇರಲಾಗಿದೆ. ಮುಖ್ಯಮಂತ್ರಿಗಳು ಅಥವಾ ಗೃಹ ಸಚಿವರು ಹೇಳಿದರೆಂದು ಪೊಲೀಸರು ಕಾನೂನುಬಾಹಿರವಾಗಿ ನಡೆದುಕೊಳ್ಳಬಾರದು. ನಾವು ಯಾವುದೇ ಕೊಲೆಯನ್ನು ಬೆಂಬಲಿಸುವುದಿಲ್ಲ. ಆದರೆ ನಿರಪರಾಧಿಗಳನ್ನು ಹತ್ತಿಕ್ಕಲು ಯತ್ನಿಸಿದರೆ ಸುಮ್ಮನಿರಲ್ಲ” ಎಂದು ಎಚ್ಚರಿಸಿದರು.

ಇದನ್ನೂ ಓದಿ; ಬಂಟ್ವಾಳದಲ್ಲಿ “ಬಿ.ಸಿ. ರೋಡ್ ಚಲೋ” ಪ್ರತಿಭಟನೆ: ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯಿದೆ ಖಂಡಿಸಿ ವಿಎಚ್‌ಪಿ-ಭಜರಂಗದಳ ಆಕ್ರೋಶ
ಸೌಜನ್ಯ ಪ್ರಕರಣದ ಎಸ್‌ಐಟಿ ವಹಿಸಿರುವ ಬಗ್ಗೆ ಹೇಳಿದ್ದೇನು?

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ‘ವಿಶೇಷ ತನಿಖಾ ತಂಡ’ (SIT) ರಚಿಸಿರುವುದನ್ನು ಸ್ವಾಗತಿಸಿದ ಕಲ್ಲಡ್ಕ ಭಟ್, ತಂಡದ ಕೆಲವು ಅಧಿಕಾರಿಗಳ ಬಗ್ಗೆ ಅಪಸ್ವರ ಎತ್ತಿದರು. “ಎಸ್‌ಐಟಿ ರಚನೆಯಾಗಿರುವುದು ಒಳ್ಳೆಯದೇ. ಆದರೆ ಆ ತಂಡದಲ್ಲಿರುವ ಎಲ್ಲ ಅಧಿಕಾರಿಗಳೂ ಕಳಂಕಿತರಲ್ಲ ಎಂದು ಹೇಳಲಾಗದು. ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಂತಹ ವೃತ್ತಿಪರ ಅಧಿಕಾರಿಗಳನ್ನು ಹೆಚ್ಚಾಗಿ ಒಳಗೊಂಡಿದ್ದರೆ ಜನರಲ್ಲಿ ನಂಬಿಕೆ ಹೆಚ್ಚುತ್ತಿತ್ತು” ಎಂದರು. ಕಳೆದ 14 ವರ್ಷಗಳಿಂದ ಸೌಜನ್ಯಳ ಆತ್ಮ ನ್ಯಾಯಕ್ಕಾಗಿ ಕಾಯುತ್ತಿದೆ. ಯಾವುದೇ ರಾಜಕೀಯ ಪ್ರಭಾವವಿಲ್ಲದೆ ಎಸ್‌ಐಟಿ ಸ್ವತಂತ್ರವಾಗಿ ತನಿಖೆ ನಡೆಸಿ ನೈಜ ಅಪರಾಧಿಗಳನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿದರು.

ಬಿ.ಸಿ. ರೋಡ್ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಕಲ್ಲಡ್ಕ ಭಟ್ ಹಾಗೂ ಭರತ್ ಕುಮ್ಡೇಲು ವಿರುದ್ಧದ ಪೋಲಿಸ್ ಕ್ರಮವನ್ನು ಕಟುವಾಗಿ ಖಂಡಿಸಿದರು.”ಇದು ಆಶೀರ್ವಾದ ಪಡೆಯುವ ಸಮಯವಲ್ಲ, ಧರ್ಮ ಹಾಗೂ ಕಾರ್ಯಕರ್ತರ ಪರವಾಗಿ ಹೋರಾಡುವ ಸಮಯ. ಭರತ್ ಕುಮ್ಡೇಲುಗೆ ಜಾಮೀನು ಸಿಗದಂತೆ ಮಾಡಲು ಆತನ ಮೇಲೆ ಗೂಂಡಾ ಕಾಯಿದೆ ಹೇರಲಾಗಿದೆ. ಒಬ್ಬ ಭರತ್ ಕುಮ್ಡೇಲು ಜೈಲಿಗೆ ಹೋದರೆ ಸಾವಿರಾರು ಭರತ್ ಕುಮ್ಡೇಲುವಿನಂತಹ ಕಾರ್ಯಕರ್ತರು ಹುಟ್ಟಿಕೊಳ್ಳುತ್ತಾರೆ. ತಕ್ಷಣವೇ ಗೂಂಡಾ ಕಾಯಿದೆ ಹಿಂಪಡೆಯಬೇಕು.”

ಹಿಂದೂ ಸಂಘಟನೆಗಳು ಯಾವುದೇ ಕೊಲೆಯನ್ನು ಬೆಂಬಲಿಸುವುದಿಲ್ಲ, ಕೆಲವು ಸನ್ನಿವೇಶಗಳಲ್ಲಿ ವೈಯಕ್ತಿಕ ಆಕ್ರೋಶದಿಂದ ಘಟನೆಗಳು ನಡೆದಿರಬಹುದು. ಆದರೆ ಸಂಘಟನೆಯ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಿದರೆ ವಿಎಚ್‌ಪಿ ಹಾಗೂ ಭಜರಂಗದಳ ಸಹಿಸುವುದಿಲ್ಲ ಎಂದು ಶ್ರೀ ರಾಜಶೇಖರಾನಂದ ಸ್ವಾಮೀಜಿ, ವಜ್ರದೇಹಿ ಮಠ ಹೇಳಿದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *