ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಪ್ರಮುಖ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಅನ್ನಭಾಗ್ಯ’ ಯೋಜನೆಗೆ ಇದೀಗ ದೊಡ್ಡ ಗ್ರಹಣ ಹಿಡಿದಂತಾಗಿದೆ. ಬಡವರ ಹೊಟ್ಟೆ ತುಂಬಿಸಬೇಕಾದ ಪಡಿತರ ಅಕ್ಕಿ (Ration Rice) ವಿತರಣೆ ರಾಜ್ಯಾದ್ಯಂತ ಸಂಪೂರ್ಣವಾಗಿ ಹಳಿ ತಪ್ಪಿದ್ದು, ತೀವ್ರ ವಿಳಂಬವಾಗುತ್ತಿದೆ. ಕಳೆದ ಮೂರು ತಿಂಗಳಿಂದ ಅಕ್ಕಿ ವಿತರಣೆಯಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದು, ಪಡಿತರ ನಂಬಿ ಜೀವನ ನಡೆಸುವ ರಾಜ್ಯದ ಲಕ್ಷಾಂತರ ಬಡ ಜನಸಾಮಾನ್ಯರು ಈಗ ಕಂಗಾಲಾಗಿದ್ದಾರೆ.
ಯೋಜನೆ ಈ ಮಟ್ಟಿಗೆ ನನೆಗುದಿಗೆ ಬಿದ್ದಿರುವುದನ್ನು ನೋಡಿದರೆ, ಅಕ್ಕಿ ಖರೀದಿಸಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲವೇ? ಎನ್ನುವ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಮೂಡತೊಡಗಿದೆ. ಸಾಮಾನ್ಯವಾಗಿ ಪ್ರತಿ ತಿಂಗಳು ದಿನಾಂಕ 5ರ ಒಳಗಾಗಿ ಅರ್ಹ ಫಲಾನುಭವಿಗಳ ಕೈ ಸೇರಬೇಕಾಗಿದ್ದ ಪಡಿತರ ಅಕ್ಕಿ, ಕಳೆದ ಮೂರು ತಿಂಗಳಿಂದ ತಿಂಗಳ ಕೊನೆಯಾದರೂ ಸರಿಯಾಗಿ ವಿತರಣೆಯಾಗುತ್ತಿಲ್ಲ.
ಇಲಾಖೆಯ ಆಂತರಿಕ ಮೂಲಗಳ ಪ್ರಕಾರ, ಅನ್ನಭಾಗ್ಯದ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರವು ಸಕಾಲಕ್ಕೆ ಹಣ ಪಾವತಿ (Payment Delayed) ಮಾಡುತ್ತಿಲ್ಲ. ಇದರ ನೇರ ಪರಿಣಾಮವಾಗಿ ಪೂರೈಕೆದಾರರಿಂದ ಅಕ್ಕಿ ಸರಬರಾಜು ಸಂಪೂರ್ಣವಾಗಿ ಕುಂಠಿತಗೊಂಡಿದೆ ಎನ್ನಲಾಗುತ್ತಿದೆ. ಸರ್ಕಾರದ ಕಡೆಯಿಂದ ಸಕಾಲಕ್ಕೆ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಗೋದಾಮುಗಳಿಗೆ ಬರಬೇಕಿದ್ದ ಅಕ್ಕಿ ಲೋಡ್‌ಗಳು ಸ್ಥಗಿತಗೊಂಡಿದ್ದು, ನ್ಯಾಯಬೆಲೆ ಅಂಗಡಿಗಳ ಮುಂದೆ ಜನ ಸರತಿ ಸಾಲಿನಲ್ಲಿ ನಿಂತು ಬರಿಗೈಲಿ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಅನ್ನವೇ ಪರಬ್ರಹ್ಮ ಸ್ವರೂಪ: ನೆಲಕ್ಕೆ ಬಿದ್ದ ಅನ್ನವನ್ನು ತಿನ್ನಬಹುದೇ? ಆಹಾರ ವ್ಯರ್ಥ ಮಾಡುವುದರಿಂದ ಆಗುವ ನಷ್ಟವೇನು?
ರಾಜ್ಯದಲ್ಲಿ ಜಾರಿಯಲ್ಲಿರುವ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಭಾರಿ ಆರ್ಥಿಕ ಹೊರೆ ಉಂಟಾಗಿದೆ ಎಂಬ ಚರ್ಚೆಗಳು ಈಗಾಗಲೇ ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಅದರ ನಡುವೆಯೇ ಬಡವರ ಆಹಾರದ ಹಕ್ಕಿಗೆ ತೊಂದರೆಯಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ಸರ್ಕಾರ ಬೇರೆ ವೆಚ್ಚಗಳನ್ನು ಕಡಿತಗೊಳಿಸಿಯಾದರೂ ಬಡವರ ಅಕ್ಕಿ ಖರೀದಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಅಕ್ಕಿ ಸಿಗದೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಅಕ್ಕಿ ಕೊಳ್ಳುವ ಶಕ್ತಿ ನಮಗಿಲ್ಲ” ಎಂದು ಪಡಿತರ ಚೀಟಿ ದಾರರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

