ನಮ್ಮೆಲ್ಲರ ಡಿಎನ್ಎ ಒಂದೇ, ಹಿಂದೂರಾಷ್ಟ್ರಕ್ಕೆ ಹೆದರಬೇಡಿ: ಮುಸ್ಲಿಮರಿಗೆ ಬಾಬಾ ರಾಮ್ ದೇವ್ ಕರೆ

ದೆಹಲಿ: ದೇಶದಲ್ಲಿ ‘ಹಿಂದೂ ರಾಷ್ಟ್ರ’ (Hindu Rashtra) ಪರಿಕಲ್ಪನೆಯ ಕುರಿತು ಸದಾ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದರ ನಡುವೆ, ಪ್ರಸಿದ್ಧ ಯೋಗ ಗುರು ಮತ್ತು ಪತಂಜಲಿ ಸಂಸ್ಥೆಯ ಮುಖ್ಯಸ್ಥರಾದ ಬಾಬಾ ರಾಮದೇವ್ ಅವರು ‘ಹಿಂದೂ ರಾಷ್ಟ್ರ’ದ ಕುರಿತು ನೀಡಿರುವ ಹೊಸ ಹೇಳಿಕೆಯೊಂದು ಇದೀಗ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ.

“ಭಾರತದಲ್ಲಿ ‘ಹಿಂದೂ ರಾಷ್ಟ್ರ’ ಎಂಬ ಪರಿಕಲ್ಪನೆಗೆ ಯಾರೂ ಭಯಪಡುವ ಅಗತ್ಯವಿಲ್ಲ. ಇಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಯಾವುದೇ ರೀತಿಯ ಅಪಾಯ ಅಥವಾ ಬೆದರಿಕೆ ಇಲ್ಲ,” ಎಂದು ರಾಮದೇವ್ ಪ್ರತಿಪಾದಿಸಿದ್ದಾರೆ.

“ಹರಿದ್ವಾರದ ಸಮೀಪವಿರುವ ದೇವಬಂದ್ (ಇಸ್ಲಾಮಿಕ್ ಸೆಮಿನರಿ) ಗೆ 2009 ರಲ್ಲಿ ನನಗೆ ಆಹ್ವಾನವಿತ್ತು. ನಾನು ಅಂದೇ ಅಲ್ಲಿ ನೆರೆದಿದ್ದವರಿಗೆ ಸ್ಪಷ್ಟವಾಗಿ ಹೇಳಿದ್ದೆ; ನಮ್ಮ ನಮ್ಮ ಧರ್ಮಗಳು ಮತ್ತು ಆಚರಣೆಗಳು ಬೇರೆಯಾಗಿರಬಹುದು, ಆದರೆ ನಮ್ಮೆಲ್ಲರ ಪೂರ್ವಜರು (Ancestors) ಒಬ್ಬರೇ. ನಮ್ಮೆಲ್ಲರ ಪೂರ್ವಜರು ಸನಾತನಿ ಹಿಂದೂ ಆರ್ಯ-ವೈದಿಕರಾಗಿದ್ದರು. ಇದು ನಮ್ಮ ಕಣ್ಣೆದುರೇ ಬರೆಯಲ್ಪಟ್ಟಿರುವ ಸತ್ಯ,” ಎಂದು ರಾಮದೇವ್ ವಿವರಿಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಗಳಿಗೆ ರಾಮದೇವ್ ಸಲಹೆ

ಒಂದು ವೇಳೆ ಭಾರತವು ಅಧಿಕೃತವಾಗಿ ‘ಹಿಂದೂ ರಾಷ್ಟ್ರ’ವಾಗಿ ಘೋಷಣೆಯಾದರೆ, ಆಗ ಇಲ್ಲಿರುವ ಮುಸ್ಲಿಮರು ಎಲ್ಲಿಗೆ ಹೋಗಬೇಕು? ಅದಕ್ಕೆ ನನ್ನ ಸರಳ ಉತ್ತರವಿಷ್ಟೇ, ನೀವೆಲ್ಲರೂ ನಿಮ್ಮ ಪೂರ್ವಜರ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಮುಕ್ತವಾಗಿ ಅಳವಡಿಸಿಕೊಳ್ಳಿ. ನೀವು ಗಡ್ಡವನ್ನು ಬಿಡಬಹುದು ಅಥವಾ ಅದನ್ನು ಕ್ಷೌರ ಮಾಡಿಕೊಳ್ಳಬಹುದು, ನಿಮಗೆ ಇಷ್ಟ ಬಂದ ಉಡುಪನ್ನು ಧರಿಸಬಹುದು. ಆದರೆ, ನಿಮ್ಮ ನಡೆ ಮತ್ತು ಚಾರಿತ್ರ್ಯ ಮಾತ್ರ ನಿಮ್ಮ ಪೂರ್ವಜರಂತೆ ಇರಲಿ. ಈ ಹಿಂದುಸ್ತಾನದಲ್ಲಿ ಮುಸ್ಲಿಮರಿಗಾಗಲಿ ಅಥವಾ ಕ್ರಿಶ್ಚಿಯನ್ನರಿಗಾಗಲಿ ಯಾವುದೇ ಕಂಟಕವಿಲ್ಲ.” ಎಂದು ಹೇಳಿದ್ದರು.

ಇದನ್ನೂ ಓದಿ: ತಮಿಳುನಾಡು ಗೋಹತ್ಯೆ ನಿಷೇಧ ಆದೇಶಕ್ಕೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ: ಮದ್ರಾಸ್ ಹೈಕೋರ್ಟ್‌  ತೀರ್ಪು ಕಾನೂನು ಚೌಕಟ್ಟು ಮೀರಿದೆ

ಬಾಬಾ ರಾಮದೇವ್ ಅವರ ಈ ಹೇಳಿಕೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ, ವಿರೋಧ ಪಕ್ಷಗಳ ನಾಯಕರು ಹಾಗೂ ಅಲ್ಪಸಂಖ್ಯಾತ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಭಾರತವು ಸಂವಿಧಾನದ ಪ್ರಕಾರ ಜಾತ್ಯತೀತ (Secular) ರಾಷ್ಟ್ರವಾಗಿದ್ದು, ಇಂತಹ ಹೇಳಿಕೆಗಳು ದೇಶದ ಬಹುಸಂಸ್ಕೃತಿ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ ಎಂದು ಹಲವರು ಕಿಡಿಕಾರಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ‘ಹಿಂದೂ ರಾಷ್ಟ್ರ’ದ ಕಾಮೆಂಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *