Breaking News

“ನೀವು ಯಾವಾಗಲೂ ನನ್ನನ್ನೇ ಟೀಕಿಸುತ್ತಿರುತ್ತೀರಿ”; ಕಲಾಪದ ನಡುವೆ ಸ್ವಪಕ್ಷದ ನಾಯಕನ ಬಳಿ ಹೋಗಿ ಆರ್ಭಟಿಸಿದ ಶಾಸಕಿ ರೂಪಕಲಾ

ಬೆಂಗಳೂರು: ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿಯ ನಡುವೆ ತೀವ್ರ ಗದ್ದಲ ನಡೆಯುತ್ತಿರುವ ಮಧ್ಯೆಯೇ, ಆಡಳಿತ ಪಕ್ಷದ ಕೋಲಾರ ಜಿಲ್ಲೆಯ ಶಾಸಕರ ನಡುವೆಯೇ ಸದನದಲ್ಲಿ ಭಾರಿ ವಾಕ್ಸಮರ ನಡೆದಿದೆ. ವಿಧಾನಸಭೆಯ ಮುಂಭಾಗದ ಸಾಲಿನ ಆಸನಗಳ ಬಳಿ ಭಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್. ಎನ್. ನಾರಾಯಣಸ್ವಾಮಿ ಮತ್ತು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ನಡುವೆ ನಡೆದಿರುವ ಆಂತರಿಕ ಜಗಳ ಹಾಗೂ ಶಾಸಕಿ ಕೈನಿಂದ ಮೇಜು ಬಡಿದ ಘಟನೆ ಇಡೀ ಸದನದಲ್ಲಿ ಭಾರಿ ಗೊಂದಲಕ್ಕೆ ಕಾರಣವಾಯಿತು.

ಶಾಸಕ ನಾರಾಯಣಸ್ವಾಮಿ ಹಾಗೂ ಬಾಗೇಪಲ್ಲಿ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಅವರು ಮುಂಭಾಗದ ಸಾಲಿನಲ್ಲಿ ಕುಳಿತಿದ್ದಾಗ, ಅಲ್ಲಿಗೆ ತೆರಳಿದ ಶಾಸಕಿ ರೂಪಕಲಾ ಅವರು ನಾರಾಯಣಸ್ವಾಮಿ ಜೊತೆ ಏರುಧ್ವನಿಯಲ್ಲಿ ವಾದಕ್ಕೆ ಇಳಿದಿದ್ದಾರೆ. ವಾದ-ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ಶಾಸಕಿ ರೂಪಕಲಾ ಅವರು ತಮ್ಮ ಮುಂಭಾಗದಲ್ಲಿದ್ದ ಮೇಜಿಗೆ ಗಟ್ಟಿಯಾಗಿ ಕೈನಿಂದ ಗುದ್ದಿದ್ದಾರೆ. ಶಾಸಕಿಯ ಏರುಧ್ವನಿ ಹಾಗೂ ಆಕ್ರೋಶ ಇಡೀ ಸದನಕ್ಕೆ ಕೇಳಿಸುವಂತಿತ್ತು.

ಘಟನೆಗೆ ಕೆಲ ಸಮಯದ ಮೊದಲು ಮೂವರೂ ಶಾಸಕರು ಹಗುರವಾದ ಮಾತುಕತೆಯಲ್ಲಿ ತೊಡಗಿದ್ದರು. ಆದರೆ ಮಾತು ಮುಂದುವರಿದಂತೆ “ನೀವು ಯಾವಾಗಲೂ ನನ್ನನ್ನೇ ಟೀಕಿಸುತ್ತಿರುತ್ತೀರಿ” ಎಂದು ರೂಪಕಲಾ ಅವರು ನಾರಾಯಣಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಶಾಸಕರ ಈ ನಡವಳಿಕೆಯನ್ನು ಗಮನಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಉಪನಾಯಕ ಅರವಿಂದ್ ಬೆಲ್ಲದ್ ತಕ್ಷಣವೇ ಸ್ಪೀಕರ್ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟದ ಬಿಸಿ: ಸರ್ಕಾರಿ ಬೊಕ್ಕಸ ಖಾಲಿ, 8.24 ಲಕ್ಷ ಕೋಟಿಗೆ ಏರಿಕೆಯಾಯ್ತು ಒಟ್ಟು ಸಾಲ; ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ತೀವ್ರ ಆಕ್ರೋಶ
“ಸದನದಲ್ಲಿ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವಾಗ, ಆಡಳಿತ ಪಕ್ಷದ ಶಾಸಕಿ ಮೇಜಜ್ಜುತ್ತಾ ಸದನದ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ. ಸ್ಪೀಕರ್ ತಕ್ಷಣವೇ ಮಧ್ಯಪ್ರವೇಶಿಸಬೇಕು” ಎಂದು ಆರ್‌‍. ಅಶೋಕ್ ಆಗ್ರಹಿಸಿದರು. ಮತ್ತೊಂದೆಡೆ ಅರವಿಂದ್ ಬೆಲ್ಲದ್ ಅವರು “ಸದನದಲ್ಲಿ ಮತ್ತೊಂದು ಗೊಂದಲದ ವಾತಾವರಣ ನಿರ್ಮಾಣವಾಗಿದೆ” ಎಂದು ಕಿಡಿಕಾರಿದರು.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಶಾಸಕಿ ರೂಪಕಲಾ ಶಶಿಧರ್, “ನಮ್ಮ ನಡುವಿನ ಸಮಸ್ಯೆಯನ್ನು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದಿದ್ದೇನೆ. ಅವರು ಈ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ. ಆಂತರಿಕ ವಿಚಾರಗಳನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ, ಶೀಘ್ರದಲ್ಲೇ ಎಲ್ಲವೂ ಸರಿಯಾಗಲಿದೆ” ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ