ತುಮಕೂರು : ಜಮೀನಿನ ಪೌತಿ ಖಾತೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಮಧುಗಿರಿ ಕಸಬಾ ಹೋಬಳಿಯ ಪ್ರಭಾರ ಕಂದಾಯ ನಿರೀಕ್ಷಕ (RI) ನಾಗೇಶ್ ಎಂಬುವವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮೂಲತಃ ಗ್ರಾಮಾಡಳಿತಾಧಿಕಾರಿಯಾಗಿದ್ದ (VA) ನಾಗೇಶ್ ಅವರು ಮಧುಗಿರಿ ಕಸಬಾ ಹೋಬಳಿಯ ಪ್ರಭಾರ ಕಂದಾಯ ನಿರೀಕ್ಷಕರಾಗಿ (In-charge Revenue Inspector) ಕರ್ತವ್ಯ ನಿರ್ವಹಿಸುತ್ತಿದ್ದರು.
ದೂರುದಾರ ರೇಣುಕೇಶ್ ಎಂಬುವವರು ತಮ್ಮ ಜಮೀನಿನ ಪೌತಿ ಖಾತೆ ಮಾಡಿಕೊಡುವಂತೆ ಮನವಿ ಮಾಡಿದ್ದರು. ಈ ಕೆಲಸಕ್ಕೆ ನಾಗೇಶ್ ಅವರು ಒಟ್ಟು 1 ಲಕ್ಷ ರೂಪಾಯಿ ಲಂಚದ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ರೇಣುಕೇಶ್ ಅವರು ಈ ಕುರಿತು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ರೂಪಿಸಿದ್ದರು. ರೇಣುಕೇಶ್ ಅವರಿಂದ 2ನೇ ಕಂತಿನ 30,000 ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ನಾಗೇಶ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಸದ್ಯ ಲಂಚದ ಹಣದ ಸಮೇತ ಪ್ರಭಾರ ಕಂದಾಯ ನಿರೀಕ್ಷಕ ನಾಗೇಶ್ ಅವರನ್ನು ಬಂಧಿಸಿರುವ ತುಮಕೂರು ಲೋಕಾಯುಕ್ತ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

