ಉಡುಪಿ: ಕರಾವಳಿಯ ಸಾಂಸ್ಕೃತಿಕ ಹೆಮ್ಮೆಯಾದ ಕಂಬಳ ಕ್ರೀಡೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ವಿವಿಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಕಂಬಳ ಆಯೋಜಕರಿಗೆ ಅತ್ಯಂತ ಸಿಹಿ ಸುದ್ದಿಯೊಂದನ್ನು ನೀಡಿದೆ. ಕರಾವಳಿ ಭಾಗದಲ್ಲಿ ನಡೆಯುವ ಪ್ರಮುಖ ಕಂಬಳಗಳ ಯಶಸ್ವಿ ಆಯೋಜನೆಗಾಗಿ ರಾಜ್ಯ ಸರ್ಕಾರವು ಒಟ್ಟು ಒಂದು ಕೋಟಿ ಹದಿನೈದು ಲಕ್ಷ ರೂಪಾಯಿ (1.15 ಕೋಟಿ) ಅನುದಾನವನ್ನು ಅಧಿಕೃತವಾಗಿ ಘೋಷಿಸಿದೆ.
ಪ್ರಸಕ್ತ 2025-26ನೇ ಸಾಲಿನಲ್ಲಿ ನಡೆಯಲಿರುವ ಒಟ್ಟು 23 ಕಂಬಳಗಳಿಗೆ ಈ ಅನುದಾನ ಲಭ್ಯವಾಗಲಿದೆ. ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಈ ಮೊತ್ತವನ್ನು ಬಿಡುಗಡೆಗೊಳಿಸಿದೆ. ಸರ್ಕಾರದ ಹೊಸ ಆದೇಶದ ಅನ್ವಯ, ಪ್ರತಿ ಕಂಬಳ ಕೂಟಕ್ಕೂ ತಲಾ 5 ಲಕ್ಷ ರೂಪಾಯಿ ಧನಸಹಾಯ ಸಿಗಲಿದೆ. ಕಂಬಳ ಆಯೋಜನೆ ಮಾಡುವುದು ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದ್ದ ಸಮಯದಲ್ಲಿ ಸರ್ಕಾರದ ಈ ಧನಸಹಾಯವು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕಂಬಳ ಆಯೋಜಕರಿಗೆ ತೀವ್ರ ಅನುಕೂಲ ಮಾಡಿಕೊಟ್ಟಿದೆ.
ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರವನ್ನು ಕಂಬಳ ಸಂಘಟಕರು ಹಾಗೂ ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಅವರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, “ರಾಜ್ಯ ಸರ್ಕಾರವು ನುಡಿದಂತೆ ನಡೆದಿದೆ. ಮುಖ್ಯಮಂತ್ರಿಗಳು ಕಂಬಳ ಆಯೋಜಕರಿಗೆ ಸಿಹಿ ಸುದ್ದಿ ನೀಡಿದ್ದಾರೆ. ತುಳುನಾಡಿನ ಸಂಸ್ಕೃತಿ ಮತ್ತು ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ಯಲು ಇದರಿಂದ ಸಹಾಯವಾಗಲಿದೆ. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗಲೂ ಪ್ರವಾಸೋದ್ಯಮ ಮತ್ತು ಕ್ರೀಡಾ ಇಲಾಖೆಯಿಂದ ಅನುದಾನ ನೀಡಿದ್ದರು. ಡಿ.ವಿ. ಸದಾನಂದ ಗೌಡರು ಸಿಎಂ ಆಗಿದ್ದಾಗಲೂ ಒಂದು ಕೋಟಿ ರೂಪಾಯಿ ನೆರವು ಕೊಟ್ಟಿದ್ದರು. ರಾಜಕೀಯ ಭೇದವಿಲ್ಲದೆ ಎಲ್ಲಾ ಸರ್ಕಾರಗಳು ಕಂಬಳವನ್ನು ಪೋಷಿಸಿಕೊಂಡು ಬಂದಿವೆ. ಮುಂದಿನ ಬಜೆಟ್‌ನಲ್ಲಿ ಕಂಬಳಕ್ಕಾಗಿ ಐದು ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ.” ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆ: ನಾಳೆ ಎಲ್ಲಾ ಶಾಲೆ, ಪಿಯು ಕಾಲೇಜುಗಳಿಗೆ ರಜೆ
ಮೈಸೂರು ಕಂಬಳ ವಿವಾದ ಹಾಗೂ ರಾಜಕೀಯದ ವಿರುದ್ಧ ಆಕ್ರೋಶ
ಇದೇ ವೇಳೆ ಮೈಸೂರು ಕಂಬಳ ಆಯೋಜನೆಗೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ರಾಜಕೀಯ ವಿರೋಧಗಳ ವಿರುದ್ಧ ದೇವಿಪ್ರಸಾದ್ ಶೆಟ್ಟಿ ಅವರು ಕರಾವಳಿಯ ಜನಪ್ರತಿನಿಧಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕಂಬಳವು ರಾಜಕೀಯ ಮತ್ತು ಧರ್ಮವನ್ನು ಮೀರಿ ನಡೆಯುವ ಕ್ರೀಡೆಯಾಗಿದೆ. ಎಲ್ಲಾ ಪಕ್ಷದವರೂ ಇದರಲ್ಲಿ ಭಾಗಿಯಾಗುತ್ತಾರೆ. ಮೈಸೂರು ಸಂಸದರು ವಿರೋಧ ಮಾಡುತ್ತಾರೆ ಎಂಬ ಕಾರಣಕ್ಕೆ ಅವರದೇ ಪಕ್ಷದ ಕರಾವಳಿಯ ಶಾಸಕರು ಕಂಬಳವನ್ನು ವಿರೋಧಿಸುವುದು ಸರಿಯಲ್ಲ” ಎಂದು ಕರಾವಳಿಯ ಬಿಜೆಪಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮೈಸೂರಿನಲ್ಲಿ ಕಂಬಳದ ಬಗ್ಗೆ ಕೆಳವರ್ಗದವರ ಮೇಲಿನ ದಬ್ಬಾಳಿಕೆ ಎಂದು ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ನಾವು ಹಿಂದುಳಿದ ವರ್ಗದ ಕೋಟಿ-ಚೆನ್ನಯ್ಯರ ಹೆಸರಲ್ಲಿ, ಸೂರ್ಯ-ಚಂದ್ರರ ಹೆಸರಲ್ಲಿ ಹಾಗೂ ಕಾಂತಬಾರೆ-ಬೂದಬಾರೆ ಹೆಸರಿನಲ್ಲಿ ಕಂಬಳ ಮಾಡುತ್ತೇವೆ. ಕಂಬಳದ ವೈಭವವನ್ನು ಇಡೀ ರಾಜ್ಯಾದ್ಯಂತ ಧೈರ್ಯವಾಗಿ ಎತ್ತಿಹಿಡಿಯುವ ಕೆಲಸವನ್ನು ಕರಾವಳಿಯ ಜನಪ್ರತಿನಿಧಿಗಳು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

