ಬೆಂಗಳೂರು: 2026-27ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬೋಧಕರ ಕೊರತೆಯನ್ನು ನೀಗಿಸಲು ಜೂನ್ ತಿಂಗಳಿನಲ್ಲೇ ಬರೊಬ್ಬರಿ 51,000 ಅತಿಥಿ ಶಿಕ್ಷಕರನ್ನು (Guest Teachers) ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಿಸಿದ್ದಾರೆ.
ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಹಿತದೃಷ್ಟಿಯಿಂದ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ಬೃಹತ್ ನೇಮಕಾತಿಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮೇ 22ರಂದೇ ಅಧಿಕೃತ ಆಡಳಿತಾತ್ಮಕ ಆದೇಶ ಹೊರಡಿಸಿದ್ದು, ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿಕೊಳ್ಳಲು ಹಸಿರು ನಿಶಾನೆ ನೀಡಿದೆ.
ಮಂಜೂರಾಗಿರುವ ಒಟ್ಟು 51 ಸಾವಿರ ಹುದ್ದೆಗಳಲ್ಲಿ ಪ್ರಾಥಮಿಕ ಶಾಲೆಗಳಿಗೆ ಅತಿ ಹೆಚ್ಚು ಹುದ್ದೆಗಳನ್ನು ನೀಡಲಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ (Primary Schools) 40,000 ಶಿಕ್ಷಕರು ಮತ್ತು ಸರ್ಕಾರಿ ಪ್ರೌಢಶಾಲೆಗಳಿಗೆ (High Schools) 11,000 ಶಿಕ್ಷಕರನ್ನು ನಿಯೋಜಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜೂನ್ ತಿಂಗಳಲ್ಲೇ ಇವರೆಲ್ಲರೂ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಇದನ್ನೂ ಓದಿ: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ: ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆಗೆ ತೆರೆ; ಫಲಿತಾಂಶ ವೀಕ್ಷಣೆ ಹೇಗೆ?
ಇದೇ ವೇಳೆ ಶಿಕ್ಷಣ ಇಲಾಖೆಯ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಹಂಚಿಕೊಂಡಿರುವ ಸಚಿವರು, ಜೂನ್ 1 ರಂದು ರಾಜ್ಯಾದ್ಯಂತ ಏಕಕಾಲಕ್ಕೆ 1,000 ಹೊಸ ‘ಕರ್ನಾಟಕ ಪಬ್ಲಿಕ್ ಶಾಲೆಗಳನ್ನು’ (KPS) ಉದ್ಘಾಟಿಸಲಾಗುವುದು ಎಂದು ತಿಳಿಸಿದ್ದಾರೆ. ಕರ್ನಾಟಕದ ಈ ಗುಣಮಟ್ಟದ ಕೆಪಿಎಸ್ ಮಾದರಿಯು ದೇಶದ ಇತರ ರಾಜ್ಯಗಳಿಗೂ ದೊಡ್ಡ ಪ್ರೇರಣೆಯಾಗಿದ್ದು, ಕೇಂದ್ರ ಸರ್ಕಾರದಿಂದಲೂ ಇದಕ್ಕೆ ವಿಶೇಷ ಅನುದಾನ ಲಭ್ಯವಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೆಮ್ಮೆಯಿಂದ ಹೇಳಿದ್ದಾರೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


