ಕಬ್ಬು ಬೆಳೆಗಾರರ ಸುದೀರ್ಘ ಹೋರಾಟಕ್ಕೆ ಕೊನೆಗೂ ಸುಖಾಂತ್ಯ!: 2 ದಿನಗಳಲ್ಲಿ ಕಬ್ಬಿನ ಅಂತಿಮ ದರ ಪ್ರಕಟ

ಬೆಳಗಾವಿ: ಸುದೀರ್ಘ ದಿನಗಳಿಂದ ಕಬ್ಬಿನ ಬೆಲೆ ಏರಿಕೆಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಸಕಾರಾತ್ಮಕ ಸುಖಾಂತ್ಯ ದೊರೆತಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರ ಅಧ್ಯಕ್ಷತೆ ಹಾಗೂ ಮಧ್ಯಸ್ಥಿಕೆಯಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಸುದೀರ್ಘ ಸಂಧಾನ ಸಭೆಯು ಯಶಸ್ವಿಯಾಗಿದ್ದು, ಇನ್ನು ಎರಡು ದಿನಗಳಲ್ಲಿ ಕಬ್ಬಿನ ಅಂತಿಮ ದರದ ಕುರಿತು ಅಂತಿಮ ನಿರ್ಧಾರ ಪ್ರಕಟವಾಗಲಿದೆ.

ಕೇಂದ್ರ ಸರ್ಕಾರವು ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (MSP) ನಿಗದಿಪಡಿಸಿದ ತಕ್ಷಣವೇ, ಅದರ ಆಧಾರದ ಮೇಲೆ ರೈತರಿಗೆ ಪಾವತಿಸಬೇಕಾದ ಕಬ್ಬಿನ ಪ್ರತಿ ಟನ್ ದರವನ್ನು ಅಂತಿಮಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

 ಸುವರ್ಣ ಸೌಧದಲ್ಲಿ ಐದು ಸುತ್ತಿನ ಸುದೀರ್ಘ ಸಭೆ:

79 ಸಕ್ಕರೆ ಕಾರ್ಖಾನೆಗಳ ಮಾಲೀಕರ ಭಾಗಿ:

ಬೆಳಗಾವಿಯ ಸುವರ್ಣ ಸೌಧ ಹಾಗೂ ಸರ್ಕ್ಯೂಟ್ ಹೌಸ್‌ನಲ್ಲಿ ಇಡೀ ದಿನ 5 ಸುತ್ತಿನ ಸರಣಿ ಸಭೆಗಳನ್ನು ನಡೆಸಲಾಯಿತು. ರಾಜ್ಯದ ಒಟ್ಟು 80 ಸಕ್ಕರೆ ಕಾರ್ಖಾನೆಗಳ ಪೈಕಿ 79 ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಪ್ರತಿನಿಧಿಗಳು ಈ ಸಂಧಾನ ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ಮಂಗಳೂರಿಗೆ ‘ವಾಕಬಿಲಿಟಿ ಆಡಿಟ್’ ಬೇಡಿಕೆ, ಸಿಎಂ‌ ಡಿಕೆಶಿಗೆ ಸಂಸದ ಚೌಟ ಪತ್ರ

9 ಸಚಿವರು & 70 ಶಾಸಕರ ಉಪಸ್ಥಿತಿ:

ಸಭೆಯಲ್ಲಿ ಸಂಪುಟದ 9 ಸಚಿವರು ಹಾಗೂ 70ಕ್ಕೂ ಹೆಚ್ಚು ಶಾಸಕರು ಉಪಸ್ಥಿತರಿದ್ದು, ಉಭಯ ಕಡೆಯವರ ಸಮ್ಮತಿಯೊಂದಿಗೆ ಸೌಹಾರ್ದಯುತ ವಾತಾವರಣದಲ್ಲಿ ಸುದೀರ್ಘ ಚರ್ಚೆ ನಡೆಸಿದರು.

ಕೇಂದ್ರ ಸಚಿವರ ಭರವಸೆಯಂತೆ ಸಕ್ಕರೆ ಎಂಎಸ್‌ಪಿ ನಿಗದಿಯಾದ ತಕ್ಷಣವೇ ರೈತರಿಗೆ ನೀಡಬೇಕಾದ ನ್ಯಾಯಯುತ ದರವನ್ನು ನಿಗದಿಪಡಿಸಲು ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ. ರೈತರು ಹಾಗೂ ಕಾರ್ಖಾನೆ ಮಾಲೀಕರು ಪ್ರಸ್ತುತ ಒಪ್ಪಂದದ ತೀರಾ ಹತ್ತಿರಕ್ಕೆ ಬಂದಿದ್ದಾರೆ. ರೈತ ಮುಖಂಡರು ತಮ್ಮ ಆಂತರಿಕ ಚರ್ಚೆಗೆ 2 ದಿನಗಳ ಕಾಲಾವಕಾಶ ಕೇಳಿದ್ದು, ಆ ನಂತರ ತಮ್ಮ ಅಂತಿಮ ನಿಲುವನ್ನು ಸರ್ಕಾರದ ಮುಂದೆ ಪ್ರಕಟಿಸಲಿದ್ದಾರೆ. “ರೈತರು ಉಳಿಯಬೇಕು, ಸಕ್ಕರೆ ಕಾರ್ಖಾನೆಗಳೂ ಉಳಿಯಬೇಕು. ಸರ್ಕಾರಕ್ಕೆ ರೈತರ ಬದುಕು ಅತ್ಯಂತ ಮುಖ್ಯ. ಕೇಂದ್ರ ಸರ್ಕಾರದ ಜೊತೆಗೂ ಮಾತುಕತೆ ನಡೆಸಿ ರೈತರ ಹಿತ ಕಾಯಲು ರಾಜ್ಯ ಸರ್ಕಾರ ಸದಾ ಬದ್ಧವಾಗಿದೆ” ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ