ಪಾಲಕ್ಕಾಡ್: ಮಂಗ್ಲೂರು ಜಂಕ್ಷನ್ ಸೇರಿದಂತೆ ಕರಾವಳಿ ಕರ್ನಾಟಕದ ರೈಲ್ವೇ ಪ್ರದೇಶಗಳನ್ನು ದಕ್ಷಿಣ ರೈಲ್ವೇಯ (Southern Railway) ಪಾಲಕ್ಕಾಡ್ ಡಿವಿಷನ್‌ನಿಂದ ಬೇರ್ಪಡಿಸಿ, ನೈಋತ್ಯ ರೈಲ್ವೇಯ (South Western Railway – SWR) ಮೈಸೂರು ವಿಭಾಗಕ್ಕೆ ವಿಲೀನಗೊಳಿಸಲು ರೈಲ್ವೇ ಮಂಡಳಿ ತೆಗೆದುಕೊಂಡಿರುವ ತೀರ್ಮಾನಕ್ಕೆ ಕೇರಳ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಏಕಪಕ್ಷೀಯ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಹಾಗೂ ಇದನ್ನು ಮರುಪರಿಶೀಲಿಸುವಂತೆ ಶೀಘ್ರದಲ್ಲೇ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಕೇರಳದ ನಾಯಕರು ಸ್ಪಷ್ಟಪಡಿಸಿದ್ದಾರೆ.
ಪಾಲಕ್ಕಾಡ್ ವಿಭಾಗದ ಒಟ್ಟು ಆದಾಯದಲ್ಲಿ ಶೇಕಡಾ 50ಕ್ಕೂ ಹೆಚ್ಚು ಭಾಗ ಮತ್ತು ಸರಕು ಸಾಗಣೆ (Freight) ಆದಾಯದಲ್ಲಿ ಶೇ. 90ರಷ್ಟು ಭಾಗ ಮಂಗಳೂರು ಹಾಗೂ ಪಣಂಬೂರು ಪೋರ್ಟ್ ಭಾಗದಿಂದಲೇ ಬರುತ್ತಿತ್ತು. ಈಗ ಈ ಭಾಗ ನೈಋತ್ಯ ರೈಲ್ವೇಗೆ ಸೇರುವುದರಿಂದ ಪಾಲಕ್ಕಾಡ್ ವಿಭಾಗ ಕೋಟ್ಯಂತರ ರೂಪಾಯಿ ವಾರ್ಷಿಕ ನಷ್ಟ ಅನುಭವಿಸಲಿದೆ.
ಇಲ್ಲಿದೆ ನೋಡಿ ಪೋಸ್ಟ್:
Unilateral decision by Railway Board to detach Mangaluru Junction from Palakkad Division & merge with South Western Railway is unacceptable. It heavily impacts revenue & development of Southern Railway & Keralam. We will take this up urgently with Prime Minister & Railway…
— V D Satheesan (@vdsatheesan) August 22, 2026
ಮಂಗ್ಲೂರು ಜಂಕ್ಷನ್ ಮತ್ತು ಕರಾವಳಿ ಭಾಗ ಹೋದರೆ ಪಾಲಕ್ಕಾಡ್ ವಿಭಾಗದ ವ್ಯಾಪ್ತಿ ತೀರಾ ಸಣ್ಣದಾಗಲಿದ್ದು, ದಕ್ಷಿಣ ರೈಲ್ವೇ ಹಾಗೂ ಕೇರಳದ ಭಾಗಕ್ಕೆ ಹೊಸ ರೈಲುಗಳ ಮಂಜೂರಾತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಅನುದಾನ ಕುಸಿಯಲಿದೆ ಎಂಬ ಆತಂಕ ಕೇರಳದ್ದಾಗಿದೆ. ಈ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ಕೇರಳ ರಾಜ್ಯ ಸರ್ಕಾರದೊಂದಿಗಾಗಲಿ ಅಥವಾ ಜನಪ್ರತಿನಿಧಿಗಳೊಂದಿಗಾಗಲಿ ಯಾವುದೇ ಸಮಾಲೋಚನೆ ನಡೆಸಲಾಗಿಲ್ಲ ಎಂದು ಮುಖಂಡರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮೊಬೈಲ್ ಫೋನ್ ವಿಚಾರಕ್ಕೆ ಕುಟುಂಬದಲ್ಲಿ ಗಲಾಟೆ: ಪ್ರಪಾತಕ್ಕೆ ಜಿಗಿದು ಒಂದೇ ಕುಟುಂಬದ ಮೂವರ ದಾರುಣ ಸಾವು
ಮತ್ತೊಂದೆಡೆ, ಮಂಗಳೂರು ರೈಲ್ವೇ ಪ್ರದೇಶವನ್ನು ನೈಋತ್ಯ ರೈಲ್ವೇಗೆ (SWR) ಸೇರಿಸಬೇಕೆಂಬುದು ದಕ್ಷಿಣ ಕನ್ನಡ ಹಾಗೂ ಕರ್ನಾಟಕದ ಜನರ ಎರಡು ದಶಕಗಳಿಗಿಂತಲೂ ಸುದೀರ್ಘ ಕನಸಾಗಿತ್ತು. ರೈಲ್ವೇ ಮಂಡಳಿಯ ಆದೇಶದಂತೆ ಅಕ್ಟೋಬರ್ 1 ರಿಂದ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಣಂಬೂರು ಹಾಗೂ ಉಳ್ಳಾಲ ರೈಲು ನಿಲ್ದಾಣಗಳು ಮೈಸೂರು ವಿಭಾಗದ ವ್ಯಾಪ್ತಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿವೆ. ಇದರಿಂದ ಕರಾವಳಿ ಕರ್ನಾಟಕ ಭಾಗದ ಮೂಲಸೌಕರ್ಯ ಅಭಿವೃದ್ಧಿ, ಬೆಂಗಳೂರು ಸಂಪರ್ಕ ಹಾಗೂ ಹೊಸ ರೈಲುಗಳ ಸೇರ್ಪಡೆಗೆ ಇದ್ದ ದೊಡ್ಡ ಆಡಳಿತಾತ್ಮಕ ತೊಡಕು ನಿವಾರಣೆಯಾಗಿದೆ.

