ದೆಹಲಿ: ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಕಾಂಪ್ಯಾಕ್ಟ್ ಎಸ್‌ಯುವಿ (Compact SUV) ಮಾದರಿಯಾದ ‘ಕಿಯಾ ಸೋನೆಟ್’ ಇತ್ತೀಚಿನ ಗ್ಲೋಬಲ್ ಎನ್‌ಸಿಎಪಿ (Global NCAP) ಕ್ರಾಶ್ ಟೆಸ್ಟ್‌ಗಳಲ್ಲಿ ಕೇವಲ 1-ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ನಿರಾಶಾದಾಯಕ ಪ್ರದರ್ಶನ ನೀಡಿದೆ. ವಯಸ್ಕರ ಸುರಕ್ಷತೆ (Adult Occupant Protection) ವಿಭಾಗದಲ್ಲಿ ಈ ಕಾರಿಗೆ ಕೇವಲ 1 ಸ್ಟಾರ್ ಸಿಕ್ಕಿದೆ. ಆದರೆ, ಭಾರತದ ವಾಹನ ಖರೀದಿದಾರರು ಈ ರೇಟಿಂಗ್ ನೋಡಿ ಆತಂಕ ಪಡುವ ಅಗತ್ಯವಿಲ್ಲ. ಯಾಕೆಂದರೆ ಈ ಟೆಸ್ಟಿಂಗ್‌ನ ಹಿಂದೆ ಒಂದು ಪ್ರಮುಖ ತಾಂತ್ರಿಕ ವ್ಯತ್ಯಾಸವಿದೆ.
ಗ್ಲೋಬಲ್ ಎನ್‌ಸಿಎಪಿ ತನ್ನ ‘ಸೇಫರ್ ಕಾರ್ಸ್ ಫಾರ್ ಆಫ್ರಿಕಾ’ (Safer Cars for Africa) ಕಾರ್ಯಕ್ರಮದ ಅಡಿಯಲ್ಲಿ ಕ್ರಾಶ್ ಟೆಸ್ಟ್ ನಡೆಸಿದ ಕಿಯಾ ಸೋನೆಟ್ ಕಾರು ಭಾರತದಲ್ಲೇ ತಯಾರಾಗಿ ದಕ್ಷಿಣ ಆಫ್ರಿಕಾಕ್ಕೆ ರಫ್ತಾದ (Export) ಮಾದರಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾಗುವ ಈ ಬೇಸ್ ಮಾಡೆಲ್ ಕಾರಿನಲ್ಲಿ ಭಾರತದ ಕಾರುಗಳಿಗೆ ಹೋಲಿಸಿದರೆ ಸುರಕ್ಷತಾ ಫೀಚರ್‌ಗಳು ಗಣನೀಯವಾಗಿ ಕಡಿಮೆ ಇವೆ.
ಕ್ರಾಶ್ ಟೆಸ್ಟ್‌ಗೆ ಒಳಗಾದ ದಕ್ಷಿಣ ಆಫ್ರಿಕಾದ ಸೋನೆಟ್ ಕಾರಿನಲ್ಲಿ ಕೇವಲ ಎರಡು ಫ್ರಂಟ್ ಏರ್‌ಬ್ಯಾಗ್‌ಗಳು ಮಾತ್ರ ಇದ್ದವು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಫೀಚರ್ ಸ್ಟ್ಯಾಂಡರ್ಡ್ ಆಗಿ ಇರಲಿಲ್ಲ. ಆದರೆ, ಭಾರತದಲ್ಲಿ ಮಾರಾಟವಾಗುವ ಕಿಯಾ ಸೋನೆಟ್ ಕಾರಿನ ಎಲ್ಲಾ ಬೇಸ್ ಮಾಡೆಲ್‌ಗಳಿಂದ ಹಿಡಿದು ಟಾಪ್ ಮಾಡೆಲ್‌ವರೆಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ (Standard) ನೀಡಲಾಗುತ್ತದೆ. ಹೀಗಾಗಿ, ದಕ್ಷಿಣ ಆಫ್ರಿಕಾ ಕಾರಿನ ಈ ಕ್ರಾಶ್ ಟೆಸ್ಟ್ ಫಲಿತಾಂಶವು ಭಾರತದ ಗ್ರಾಹಕರಿಗೆ ನೇರವಾಗಿ ಅನ್ವಯಿಸುವುದಿಲ್ಲ.
ಕ್ರಾಶ್ ಟೆಸ್ಟ್‌ನಲ್ಲಿ ಕಿಯಾ ಸೋನೆಟ್ ಒಟ್ಟು 34 ಅಂಕಗಳಿಗೆ 21.29 ಅಂಕಗಳನ್ನು ಗಳಿಸಿ 1-ಸ್ಟಾರ್ ರೇಟಿಂಗ್ ಪಡೆದಿದೆ. ಮುಂಭಾಗದ ಡಿಕ್ಕಿಯ (Front Impact) ಪರೀಕ್ಷೆಯಲ್ಲಿ ಚಾಲಕ ಮತ್ತು ಮುಂಭಾಗದ ಪ್ರಯಾಣಿಕರ ತಲೆ ಹಾಗೂ ಕುತ್ತಿಗೆಗೆ ಉತ್ತಮ ರಕ್ಷಣೆ ಸಿಗುತ್ತದೆ ಎಂದು ಗ್ಲೋಬಲ್ ಎನ್‌ಸಿಎಪಿ ವರದಿ ಮಾಡಿದೆ. ಚಾಲಕನ ಎದೆಯ ಭಾಗಕ್ಕೆ ಸಾಧಾರಣ ರಕ್ಷಣೆ ಸಿಕ್ಕರೆ, ಪ್ರಯಾಣಿಕನ ಎದೆಯ ಭಾಗಕ್ಕೆ ಉತ್ತಮ ರಕ್ಷಣೆ ಸಿಕ್ಕಿದೆ. ಆದರೆ, ಅಪಘಾತದ ಸಮಯದಲ್ಲಿ ಡ್ಯಾಶ್‌ಬೋರ್ಡ್ ಹಿಂಭಾಗದ ಗಟ್ಟಿಯಾದ ಕಬ್ಬಿಣದ ಭಾಗಗಳಿಗೆ ಕಾಲುಗಳು ತಗುಲುವ ಸಾಧ್ಯತೆ ಇರುವುದರಿಂದ ಮೊಣಕಾಲಿನ ರಕ್ಷಣೆಯು ತೀರಾ ಕಳಪೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಟೋ ಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


