ಮಾರುತಿ ಸುಜುಕಿ ಕಾರು ಗ್ರಾಹಕರಿಗೆ ಬಂಪರ್ ಆಫರ್: ಜೂನ್ 14ರೊಳಗೆ ಬುಕ್ ಮಾಡಿದ್ರೆ ಸಿಗಲಿದೆ ಹಳೇ ಬೆಲೆ; 30,000 ರೂ. ವರೆಗೆ ಹಣ ಉಳಿಸಲು ಸುವರ್ಣ ಅವಕಾಶ!

ನೀವು ಈ ತಿಂಗಳು ಹೊಸ ಕಾರು ಖರೀದಿಸಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ (Maruti Suzuki) ತನ್ನ ಬಜೆಟ್ ಸ್ನೇಹಿ ಗ್ರಾಹಕರಿಗಾಗಿ ಭರ್ಜರಿ ಸುವರ್ಣ ಅವಕಾಶವೊಂದನ್ನು ಹೊತ್ತು ತಂದಿದೆ. ಜೂನ್ 14, 2026 ರ ಒಳಗೆ ಕಾರು ಬುಕ್ ಮಾಡುವ ಗ್ರಾಹಕರಿಗೆ ಮುಂಬರುವ ಬೆಲೆ ಏರಿಕೆಯಿಂದ ಸಂಪೂರ್ಣ ವಿನಾಯಿತಿ ನೀಡುವ ‘ಬೆಲೆ ರಕ್ಷಣೆ ಯೋಜನೆ’ (Price Protection Scheme) ಯನ್ನು ಕಂಪನಿ ಪ್ರಕಟಿಸಿದೆ.

ನಿರಂತರ ಹಣದುಬ್ಬರದ ಒತ್ತಡ ಹಾಗೂ ವಾಹನ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ತನ್ನ ಕಾರುಗಳ ದರವನ್ನು ಸದ್ಯದಲ್ಲೇ ರೂ. 30,000 ವರೆಗೆ ಹೆಚ್ಚಿಸಲು ನಿರ್ಧರಿಸಿದೆ. ಯಾವ ಮಾಡೆಲ್‌ಗೆ ಎಷ್ಟು ಬೆಲೆ ಏರಿಕೆಯಾಗಲಿದೆ ಎಂಬುದನ್ನು ಕಂಪನಿ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ, ಜೂನ್ 14 ರೊಳಗೆ ಅಥವಾ ಅದಕ್ಕೂ ಮುನ್ನ ಕಾರನ್ನು ಕಾಯ್ದಿರಿಸುವ ಗ್ರಾಹಕರು ಪ್ರಸ್ತುತ ಚಾಲ್ತಿಯಲ್ಲಿರುವ ಹಳೆಯ ದರದಲ್ಲೇ ಕಾರನ್ನು ಮನೆಗೆ ಕೊಂಡೊಯ್ಯಬಹುದು. ಕಾರು ವಿತರಣೆಯಾಗುವ ಮುನ್ನ ಕಂಪನಿಯು ಬೆಲೆ ಹೆಚ್ಚಿಸಿದರೂ ಸಹ ಗ್ರಾಹಕರಿಗೆ ಅದರ ಬಿಸಿ ತಟ್ಟುವುದಿಲ್ಲ.

ಇದನ್ನೂ ಓದಿ: ವಾಹನ ಚಾಲಕರಿಗೆ ಕೇಂದ್ರದ ಬಂಪರ್ ಗಿಫ್ಟ್!: 20 ವರ್ಷಗಳ ಡ್ರೈವಿಂಗ್ ಲೈಸೆನ್ಸ್ ಅವಧಿ 50 ವರ್ಷಕ್ಕೆ ವಿಸ್ತರಣೆ?

ಯಾವೆಲ್ಲಾ ಕಾರುಗಳಿಗೆ ಈ ಆಫರ್ ಅನ್ವಯ?:

ಮಾರುತಿ ಸುಜುಕಿಯ ಆರಂಭಿಕ ಹಂತದ ಸಣ್ಣ ಹಾಗೂ ಜನಪ್ರಿಯ ಕಾರು ಮಾದರಿಗಳಿಗೆ ಮಾತ್ರ ಈ ಬೆಲೆ ರಕ್ಷಣೆ ಯೋಜನೆ ಅನ್ವಯವಾಗುತ್ತದೆ. ಆ ಕಾರುಗಳ ಪಟ್ಟಿ ಇಲ್ಲಿದೆ:

ಆಲ್ಟೊ ಕೆ10 (Alto K10)

ವ್ಯಾಗನ್ಆರ್ (WagonR)

ಸೆಲೆರಿಯೊ (Celerio)

ಎಸ್-ಪ್ರೆಸ್ಸೋ (S-Presso)

ಮೊದಲ ಬಾರಿ ಕಾರು ಖರೀದಿಸುವಾಗ ಒಟ್ಟಿಗೆ ದೊಡ್ಡ ಮೊತ್ತದ ಮುಂಗಡ ಹಣ ಹೊಂದಿಸಲು ಕಷ್ಟಪಡುವ ಗ್ರಾಹಕರಿಗಾಗಿ ಮಾರುತಿ ಸುಜುಕಿ ‘ಸುಹಾನಾ ಸಫರ್’ ಹೆಸರಿನ ವಿನೂತನ ಉಳಿತಾಯ ಆಧಾರಿತ ಆಟೋ ಫೈನಾನ್ಸ್ ಕಾರ್ಯಕ್ರಮವನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ, ಕಾರು ಕೊಳ್ಳಬಯಸುವವರು ತಾವು ಮುಂದೆ ಕಟ್ಟಬಹುದಾದ ಅಂದಾಜು ಇಎಂಐ (EMI) ಗೆ ಸಮಾನವಾದ ಮಾಸಿಕ ಮೊತ್ತವನ್ನು ರಿಕರಿಂಗ್ ಡೆಪಾಸಿಟ್ (RD) ಖಾತೆಯಲ್ಲಿ ಜಮಾ ಮಾಡಬಹುದು. ಈ ಹಣಕ್ಕೆ ಬ್ಯಾಂಕ್‌ನಿಂದ ಉತ್ತಮ ಬಡ್ಡಿಯೂ ಸಿಗಲಿದ್ದು, ಇದು 3 ರಿಂದ 6 ತಿಂಗಳ ಅವಧಿಯಲ್ಲಿ ಮುಕ್ತಾಯಗೊಳ್ಳುತ್ತದೆ (Mature ಆಗುತ್ತದೆ). ಈ ಅವಧಿ ಮುಗಿದ ನಂತರ, ಸಂಗ್ರಹವಾದ ಒಟ್ಟು ಮೊತ್ತವನ್ನು ಅದೇ ಬ್ಯಾಂಕ್‌ನಿಂದ ವಾಹನ ಸಾಲ (Vehicle Loan) ಪಡೆಯುವಾಗ ಡೌನ್ ಪೇಮೆಂಟ್ ಆಗಿ ಬಳಸಿಕೊಳ್ಳಬಹುದು. ಈ ಯೋಜನೆಯೂ ಸಹ ಆಲ್ಟೊ ಕೆ10, ಎಸ್-ಪ್ರೆಸ್ಸೋ, ಸೆಲೆರಿಯೊ ಮತ್ತು ವ್ಯಾಗನ್ಆರ್ ಕಾರು ಖರೀದಿಸುವವರಿಗೆ ಲಭ್ಯವಿದೆ.

ಆಟೋ ಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು