ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಮುಗಿಸಿ ಕೊಡಚಾದ್ರಿಗೆ ಪ್ರವಾಸ ತೆರಳಿದ್ದ ಕೇರಳ ಮೂಲದ ಪ್ರವಾಸಿಗರ ಜೀಪ್‌ಗೆ ಮೀನು ಸಾಗಾಟದ ಇನ್ಸುಲೇಟರ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಭೀಕರ ಘಟನೆ ಬೈಂದೂರು ತಾಲೂಕಿನ ಕೊಲ್ಲೂರು-ಕೊಡಚಾದ್ರಿ ಮಾರ್ಗದ ದಳಿ ಎಂಬಲ್ಲಿ ನಡೆದಿದೆ.
ಕೇರಳದಿಂದ ಟೂರಿಸ್ಟ್ ಬಸ್ ಮೂಲಕ ಕೊಲ್ಲೂರಿಗೆ ಬಂದಿದ್ದ ನೆರೆಹೊರೆಯ ನಿವಾಸಿಗಳು ಹಾಗೂ ಸಂಬಂಧಿಕರು ಕೊಲ್ಲೂರು ದೇವಿಯ ದರ್ಶನ ಮುಗಿಸಿದ್ದರು. ಬಳಿಕ ಕೊಡಚಾದ್ರಿ ಪ್ರಕೃತಿ ಸೌಂದರ್ಯ ವೀಕ್ಷಿಸಲು ಸ್ಥಳೀಯ ಪ್ರವಾಸಿ ಜೀಪ್ ಬಾಡಿಗೆಗೆ ಪಡೆದು ತೆರಳಿದ್ದರು. ಕೊಡಚಾದ್ರಿಯಿಂದ ವಾಪಸ್ ಕೊಲ್ಲೂರಿಗೆ ಜೀಪಿನಲ್ಲಿ ಬರುತ್ತಿದ್ದಾಗ, ಮಲ್ಪೆಯಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಮೀನು ಸಾಗಾಟದ ಇನ್ಸುಲೇಟರ್ ವಾಹನವು ಇಳಿಜಾರು ಪ್ರದೇಶದಲ್ಲಿ ನಿಯಂತ್ರಣ ತಪ್ಪಿ ಜೀಪ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಜೀಪಿನಲ್ಲಿದ್ದ ಇಬ್ಬರು ಮಹಿಳೆಯರು ಗುರುತು ಹಿಡಿಯಲಾರದ ಸ್ಥಿತಿಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ದುರ್ಘಟನೆಯಲ್ಲಿ ಜೀಪಿನಲ್ಲಿದ್ದ ಮೂವರು ಪುಟ್ಟ ಮಕ್ಕಳು ಹಾಗೂ ಸ್ಥಳೀಯ ಜೀಪ್ ಚಾಲಕ ಸೇರಿದಂತೆ ಒಟ್ಟು ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಕುಂದಾಪುರ, ಉಡುಪಿ ಹಾಗೂ ಮಣಿಪಾಲದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕೊಲ್ಲೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಸ್ಥರ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


