ಪುತ್ತೂರು: ಪರಿಸರ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿ ಜಾಗೃತಿಯ ಉದ್ದೇಶದಿಂದ 2021 ರಲ್ಲಿ ಪ್ರಾರಂಭಗೊಂಡ ‘ಗ್ರೀನ್ ಇಂಪಾಕ್ಟ್ ಫೌಂಡೇಶನ್’ ಸಂಸ್ಥೆಯ ಕಾನೂನು ಸಲಹೆಗಾರರಾಗಿ ಪುತ್ತೂರಿನ ಅನಿಕೇತನ ಲಾ ಚೇಂಬರ್ಸ್‌ನ ಪ್ರಸಿದ್ಧ ವಕೀಲ ಕೃಷ್ಣ ಪ್ರಸಾದ್ ನಡ್ಸಾರ್ ಅವರು ನೇಮಕಗೊಂಡಿದ್ದಾರೆ.
ಕಾನೂನು ಮತ್ತು ಪರಿಸರ ಕ್ಷೇತ್ರದಲ್ಲಿ ಸುದೀರ್ಘ ಅನುಭವ:
ವಕೀಲ ವೃತ್ತಿಯ ಜೊತೆಗೆ ಕಾನೂನು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ಗುರುತಿಸಿಕೊಂಡಿರುವ ಕೃಷ್ಣ ಪ್ರಸಾದ್ ನಡ್ಸಾರ್ ಅವರು ‘ಅನಿಕೇತನ ಎಜುಕೇಶನಲ್ ಟ್ರಸ್ಟ್’ನ ಆಡಳಿತ ಟ್ರಸ್ಟಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಸರ ಸಂಬಂಧಿತ ಕಾನೂನುಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರು ನೂರಾರು ತರಬೇತಿ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದ್ದಾರೆ. ದೂರದರ್ಶನ ಚಂದನ ಟಿವಿ ಹಾಗೂ ಬೆಂಗಳೂರು ಆಕಾಶವಾಣಿಯ ವಿವಿಧ ಕಾನೂನು ಜಾಗೃತಿ ಕಾರ್ಯಕ್ರಮಗಳ ಮೂಲಕ ಕಾನೂನು ಜಾಗೃತಿ ಮೂಡಿಸುತ್ತಿರುವ ಕೃಷ್ಣ ಪ್ರಸಾದ್ ಅವರು ಹಲವು ಸರ್ಕಾರೇತರ ಸಂಸ್ಥೆಗಳೊಂದಿಗೆ (NGO) ನಿಕಟ ಬಾಂಧವ್ಯ ಹೊಂದಿದ್ದಾರೆ.
ಇದನ್ನೂ ಓದಿ; ಅಬ್ದುಲ್ ರಹಿಮಾನ್ ಹತ್ಯೆ ಕೇಸ್: RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಪೊಲೀಸ್ ನೋಟಿಸ್
ಮಹಿಳಾ ಸಬಲೀಕರಣ ಹಾಗೂ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ‘ನ್ಯಾಯ ಸಂಸ್ಥೆ’ಯ ಸಹಭಾಗಿತ್ವ. ತ್ಯಾಜ್ಯ ವಿಲೇವಾರಿ ಹಾಗೂ ಪೌರಕಾರ್ಮಿಕರ ಹಕ್ಕುಗಳು ಮತ್ತು ಸಮಸ್ಯೆಗಳ ಪರ ಧ್ವನಿಯೆತ್ತುತ್ತಿರುವ ‘ಹಸಿರುದಳ’ ಸಂಸ್ಥೆಯೊಂದಿಗೆ ಸಕ್ರಿಯ ಒಡನಾಟ. ‘ಕರ್ನಾಟಕ ಪತ್ರಕರ್ತರ ಸಂಘ’ದ ಪುತ್ತೂರು ಘಟಕದ ಪ್ರಥಮ ಕಾನೂನು ಸಲಹೆಗಾರರಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ರಕ್ಷಣೆ ಮತ್ತು ಜಾಗೃತಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಗ್ರೀನ್ ಇಂಪಾಕ್ಟ್ ಫೌಂಡೇಶನ್‌ಗೆ ಇವರ ಸೇರ್ಪಡೆಯು ಸಂಸ್ಥೆಯ ಕಾನೂನಾತ್ಮಕ ಹೋರಾಟ ಹಾಗೂ ಜಾಗೃತಿ ಅಭಿಯಾನಗಳಿಗೆ ಹೆಚ್ಚಿನ ಬಲ ತುಂಬಲಿದೆ.

