ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ದಿಢೀರ್ ಪ್ರಜ್ಞೆ ತಪ್ಪಿ ಬಿದ್ದಾಗ, ತಕ್ಷಣವೇ ಸಮಯಪ್ರಜ್ಞೆ ಮೆರೆದ ಕೆಎಸ್ಆರ್ಟಿಸಿ (KSRTC) ಬಸ್ ಚಾಲಕ ಹಾಗೂ ನಿರ್ವಾಹಕ ಇಡೀ ಬಸ್ ಅನ್ನು ನೇರವಾಗಿ ಆಸ್ಪತ್ರೆಗೇ ಚಲಾಯಿಸಿಕೊಂಡು ಹೋಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸುವ ಮೂಲಕ ಆಕೆಯ ಜೀವ ಉಳಿಸಿದ್ದಾರೆ.
ಸಂಗಳವಾರ (ಅಕ್ಟೋಬರ್ 6) ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ಈ ಪ್ರಸಂಗ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಘಟನೆಯ ವಿವರ:
ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಬಾಳೆಹೊನ್ನೂರು ನಿವಾಸಿ ಅನ್ನಪೂರ್ಣ ಎಂಬ ಮಹಿಳೆ ಪ್ರಯಾಣಿಸುತ್ತಿದ್ದರು. ಬಸ್ ಕಕ್ಕಿಂಜೆ ಸಮೀಪಿಸುತ್ತಿದ್ದಂತೆ ಆಕೆಗೆ ದಿಢೀರ್ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡು, ಮಾತನಾಡಲು ಅಥವಾ ಕಸೆಯಲು ಸಾಧ್ಯವಾಗದೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸಹಪ್ರಯಾಣಿಕರು ತಕ್ಷಣವೇ ಬಸ್ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.
ಮಹಿಳೆಯ ಪರಿಸ್ಥಿತಿ ಗಂಭೀರವಾಗಿರುವುದನ್ನು ಅರಿತ ಬಸ್ ಚಾಲಕ ಕಿರಣ್ ಹಾಗೂ ನಿರ್ವಾಹಕ ಸಂತೋಷ್ ಸಂಗಪ್ಪ ಗೌಡ ಅವರು ಕ್ಷಣವೂ ತಡಮಾಡದೆ ಬಸ್ ಅನ್ನು ಕಕ್ಕಿಂಜೆಯಲ್ಲಿರುವ ‘ಶ್ರೀ ಕೃಷ್ಣ ಆಸ್ಪತ್ರೆ’ಯ ಕಡೆಗೆ ತಿರುಗಿಸಿ ನೇರವಾಗಿ ಆಸ್ಪತ್ರೆಯ ಆವರಣಕ್ಕೆ ಕೊಂಡೊಯ್ದರು.
ಸ್ಥಳೀಯರಿಂದಲೂ ನೆರವು – ಚೇತರಿಸಿಕೊಳ್ಳುತ್ತಿರುವ ಮಹಿಳೆ:
ಬಸ್ ಆಸ್ಪತ್ರೆ ತಲುಪುತ್ತಿದ್ದಂತೆ ಸಿಬ್ಬಂದಿ ಹಾಗೂ ಪ್ರಯಾಣಿಕರು ಮಹಿಳೆಯನ್ನು ತಕ್ಷಣವೇ ತುರ್ತು ನಿಗಾ ಘಟಕಕ್ಕೆ ದಾಖಲಿಸಲು ನೆರವಾದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಅಶ್ರಫ್ ಚಾರ್ಮಾಡಿ, ಫಾರೂಕ್ ಕಕ್ಕಿಂಜೆ ಹಾಗೂ ನೌಫಲ್ ಕಕ್ಕಿಂಜೆ ಅವರು ಸಹ ತುರ್ತು ನೆರವು ನೀಡಿ ಮಾನವೀಯತೆ ಮೆರೆದರು.
ಬಾಳೆಹೊನ್ನೂರಿನ ನಿವಾಸಿ ಅನ್ನಪೂರ್ಣ ಅವರಿಗೆ ಪ್ರಸ್ತುತ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಚಾಲಕ ಹಾಗೂ ನಿರ್ವಾಹಕರ ಜಾಗರೂಕತೆ ಮತ್ತು ಕಾಳಜಿಗೆ ಪ್ರಯಾಣಿಕರು ಹಾಗೂ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

