ಮೂಳೆಗಳು ಬರೀ ದೇಹದ ಚೌಕಟ್ಟು ಮಾತ್ರವಲ್ಲ, ಶೂಗರ್ ಕಂಟ್ರೋಲ್ ಮಾಡುವ ಅಂಗ

ಮಾನವನ ದೇಹದಲ್ಲಿ ಮೂಳೆಗಳು (Bones) ಎಂದರೆ ಕೇವಲ ದೇಹಕ್ಕೆ ಆಕಾರ ಕೊಡುವ, ಅಂಗಾಂಗಗಳನ್ನು ರಕ್ಷಿಸುವ ಮತ್ತು ಖನಿಜಗಳನ್ನು ಸಂಗ್ರಹಿಸಿಡುವ ಶಾರೀರಿಕ ಚೌಕಟ್ಟು ಎಂದೇ ನಾವು ಭಾವಿಸಿದ್ದೇವೆ. ಇನ್ನು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ (Blood Sugar Regulation) ಎಂದರೆ ಮೇದೋಜೀರಕ ಗ್ರಂಥಿ (Pancreas), ಯಕೃತ್ತು (Liver), ಸ್ನಾಯುಗಳು ಹಾಗೂ ಇನ್ಸುಲಿನ್ ಹಾರ್ಮೋನ್‌ಗಳಿಗೆ ಮಾತ್ರ ಸಂಬಂಧಿಸಿದ್ದು ಎಂಬುದು ಸಾರ್ವಜನಿಕ ನಂಬಿಕೆ.

ಆದರೆ, ನಮ್ಮ ಮೂಳೆಗಳು ಸಹ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ! – ಎಂಬ ಅಚ್ಚರಿಯ ವೈಜ್ಞಾನಿಕ ಸತ್ಯವನ್ನು ವೈದ್ಯಕೀಯ ತಜ್ಞರು ಬಹಿರಂಗಪಡಿಸಿದ್ದಾರೆ.

 ಮೂಳೆಗಳು ಶೂಗರ್ ನಿಯಂತ್ರಿಸುವುದು ಹೇಗೆ?:

ನವದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯ ಹಿರಿಯ ಅಸ್ಥಿಚಿಕಿತ್ಸಕ ಮತ್ತು ಕೀಲು ಬದಲಿ ಶಸ್ತ್ರಚಿಕಿತ್ಸಕ ಡಾ. ರಾಜು ವೈಶ್ಯ ಅವರ ಪ್ರಕಾರ, ಮೂಳೆಗಳು ಕೇವಲ ಭೌತಿಕ ಅಂಗವಲ್ಲ, ಅವು ‘ಅಂತಃಸ್ರಾವಕ ಅಂಗವಾಗಿ’ (Endocrine Organ) ಸಹ ಕಾರ್ಯನಿರ್ವಹಿಸುತ್ತವೆ.

ಆಸ್ಟಿಯೋಕ್ಯಾಲ್ಸಿನ್ (Osteocalcin) ಹಾರ್ಮೋನ್: ಮೂಳೆಗಳನ್ನು ನಿರ್ಮಿಸುವ ‘ಆಸ್ಟಿಯೋಬ್ಲಾಸ್ಟ್’ ಜೀವಕೋಶಗಳು ಆಸ್ಟಿಯೋಕ್ಯಾಲ್ಸಿನ್ ಎಂಬ ಪ್ರೋಟೀನ್/ಹಾರ್ಮೋನ್ ಅನ್ನು ಉತ್ಪಾದಿಸುತ್ತವೆ.

ಇನ್ಸುಲಿನ್ ಉತ್ಪಾದನೆಗೆ ಚಾಲನೆ: ಈ ಹಾರ್ಮೋನ್ ಮೇದೋಜೀರಕ ಗ್ರಂಥಿಯ ‘ಬೀಟಾ ಜೀವಕೋಶಗಳ’ (Pancreatic Beta-cells) ಮೇಲೆ ಪ್ರಭಾವ ಬೀರಿ, ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಇನ್ಸುಲಿನ್ ಸಂವೇದನಾಶೀಲತೆಯನ್ನು (Insulin Sensitivity) ಸುಧಾರಿಸಲು ನೆರವಾಗುತ್ತದೆ.

ದ್ವಿಮುಖ ಸಂಪರ್ಕ (Feedback Loop): ಮೂಳೆಯ ಹಾರ್ಮೋನ್ ಇನ್ಸುಲಿನ್ ಸ್ರವಿಕೆಗೆ ನೆರವಾದರೆ, ಇನ್ಸುಲಿನ್ ಸಿಗ್ನಲ್‌ಗಳು ಮರಳಿ ಮೂಳೆಗಳ ಆರೋಗ್ಯ ಹಾಗೂ ಆಸ್ಟಿಯೋಕ್ಯಾಲ್ಸಿನ್ ಸಕ್ರಿಯಗೊಳಿಸುವಿಕೆಗೆ ನೆರವಾಗುತ್ತವೆ. ಈ ಮೂಲಕ ಮೂಳೆ ಹಾಗೂ ಮೇದೋಜೀರಕ ಗ್ರಂಥಿಯ ನಡುವೆ ನಿರಂತರ ಸಂಪರ್ಕ ಜಾಲವಿರುತ್ತದೆ.

ಸಂಶೋಧನೆಗಳು ಮತ್ತು ವೈದ್ಯಕೀಯ ವಾಸ್ತವ:

ಪ್ರಾಣಿಗಳು ಹಾಗೂ ಜೀವಕೋಶಗಳ ಮಟ್ಟದಲ್ಲಿ ನಡೆಸಿದ ಪ್ರಯೋಗಗಳಲ್ಲಿ ಮೂಳೆಗಳು ರಕ್ತದ ಸಕ್ಕರೆ ಪ್ರಮಾಣ ಹಾಗೂ ಗ್ಲೂಕೋಸ್ ಶೇಖರಣೆಯ ಮೇಲೆ ನೇರ ಪರಿಣಾಮ ಬೀರುವುದು ಸಾಬೀತಾಗಿದೆ. ಆದಾಗ್ಯೂ, ಮಾನವರಲ್ಲಿ ಈ ಪ್ರಕ್ರಿಯೆ ಎಷ್ಟು ಶೇಕಡಾವಾರು ನೇರವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇನ್ನಷ್ಟು ವಿಸ್ತೃತ ಸಂಶೋಧನೆಗಳು ನಡೆಯುತ್ತಿವೆ.

ಇನ್ಸುಲಿನ್, ಐಜಿಎಫ್-1 (IGF-1), ಉರಿಯೂತದ ಸಿಗ್ನಲ್‌ಗಳು (Inflammatory Signals) ಮತ್ತು ಶಾರೀರಿಕ ಚಟುವಟಿಕೆಗಳಂತಹ (Mechanical Loading) ಇತರ ಪರೋಕ್ಷ ಅಂಶಗಳು ಸಹ ಈ ಕೊಂಡಿಯನ್ನು ಬೆಸೆಯುತ್ತವೆ.

 ಟೈಪ್-2 ಮಧುಮೇಹಿಗಳಿಗೆ ಹೆಚ್ಚಿದ ‘ಮೂಳೆ ಮುರಿತದ’ ಅಪಾಯ:

ಡಾ. ರಾಜು ವೈಶ್ಯ ಅವರ ಪ್ರಕಾರ, ಮಧುಮೇಹ (Diabetes) ಮತ್ತು ಮೂಳೆಗಳ ಆರೋಗ್ಯದ ನಡುವೆ ದ್ವಿಮುಖ ಸಂಬಂಧವಿದೆ.

ಟೈಪ್-2 ಮಧುಮೇಹ (Type 2 Diabetes) ಹೊಂದಿರುವ ವ್ಯಕ್ತಿಗಳಲ್ಲಿ ಮೂಳೆಗಳ ಸಾಂದ್ರತೆ (Bone Mineral Density) ಸಾಮಾನ್ಯವಾಗಿದ್ದರೂ ಸಹ, ಅವರಲ್ಲಿ ಮೂಳೆ ಸವಕಳಿ ಹಾಗೂ ಸುಲಭವಾಗಿ ಮೂಳೆ ಮುರಿಯುವ (Fragility Fractures) ಅಪಾಯ ಅತ್ಯಂತ ಹೆಚ್ಚಾಗಿರುತ್ತದೆ.

ರಕ್ತದಲ್ಲಿನ ದೀರ್ಘಕಾಲದ ಅಧಿಕ ಸಕ್ಕರೆ ಪ್ರಮಾಣ (Hyperglycaemia), ಇನ್ಸುಲಿನ್ ರೋಧಕತೆ ಹಾಗೂ ದೇಹದಲ್ಲಿನ ಉರಿಯೂತಗಳು ಮೂಳೆಗಳ ಗುಣಮಟ್ಟ ಮತ್ತು ಆಂತರಿಕ ರಚನೆಯನ್ನು (Microarchitecture) ಹಾನಿಗೊಳಿಸುತ್ತವೆ.

ಇದನ್ನೂ ಓದಿ: ಇನ್ಮುಂದೆ ಉಪ್ಪಿನ ಪ್ಯಾಕೆಟ್ ಮೇಲೂ ‘ಸಿಗರೇಟ್ ಮಾದರಿ’ ವಾರ್ನಿಂಗ್ ಲೇಬಲ್

ಮೂಳೆಗಳ ಚಯಾಪಚಯ ಪ್ರಕ್ರಿಯೆಯು ಗ್ಲೂಕೋಸ್ ನಿಯಂತ್ರಣದ ಮೇಲೆ ಪ್ರಭಾವ ಬೀರುತ್ತದೆ ಎಂಬುದು ವೈಜ್ಞಾನಿಕವಾಗಿ ನಿಜವಾದರೂ, ಬರೀ ಮೂಳೆಗಳ ಆರೋಗ್ಯ ಸುಧಾರಿಸಿದ ತಕ್ಷಣವೇ ಮಧುಮೇಹ ಸಂಪೂರ್ಣ ಗುಣವಾಗುತ್ತದೆ ಎಂದು ಭಾವಿಸಬಾರದು. ರಕ್ತದ ಸಕ್ಕರೆ ಹಾಗೂ ಮೂಳೆಗಳ ಆರೋಗ್ಯವೆರಡನ್ನೂ ಸಮತೋಲನದಲ್ಲಿಡುವುದು ಸಮಗ್ರ ಆರೋಗ್ಯಕ್ಕೆ ಅತ್ಯಗತ್ಯ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *