ವಿಶ್ವ ಫುಟ್‌ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ (Lionel Messi) ಅವರು ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ವಿರುದ್ಧದ ಸೋಲಿನ ನಂತರ ೩೯ ವರ್ಷದ ಮೆಸ್ಸಿ ತಮ್ಮ ಸುದೀರ್ಘ ಮತ್ತು ಯಶಸ್ವಿ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಮೆಸ್ಸಿ, “ಈ ನಿರ್ಧಾರ ನನ್ನ ಆತ್ಮಕ್ಕೆ ತೀವ್ರ ನೋವುಂಟುಮಾಡಿದೆ, ಆದರೆ ವಿದಾಯ ಹೇಳುವ ಸಮಯ ಬಂದಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
View this post on Instagram
ದಾಖಲೆಗಳ ಸರದಾರ ಮೆಸ್ಸಿಯ ಅಂತಾರಾಷ್ಟ್ರೀಯ ಸಾಧನೆಗಳು
ಮೆಸ್ಸಿ ಅರ್ಜೆಂಟೀನಾ ಪರ ಬರೋಬ್ಬರಿ 207 ಪಂದ್ಯಗಳನ್ನು ಆಡಿದ್ದು, 125 ಗೋಲುಗಳನ್ನು ಬಾರಿಸುವ ಮೂಲಕ ದೇಶದ ಸಾರ್ವಕಾಲಿಕ ಗರಿಷ್ಠ ಗೋಲು ಸರದಾರ ಎನಿಸಿಕೊಂಡಿದ್ದಾರೆ. 2022 ರಲ್ಲಿ ಖತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾಗೆ ವಿಶ್ವಕಪ್ ಟ್ರೋಫಿ ಗೆದ್ದುಕೊಟ್ಟಿದ್ದು ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಅತಿದೊಡ್ಡ ಸಾಧನೆಯಾಗಿದೆ. ಮೆಸ್ಸಿ ತಮ್ಮ ವೃತ್ತಿಜೀವನದಲ್ಲಿ ಒಟ್ಟು 6 ವಿಶ್ವಕಪ್‌ಗಳಲ್ಲಿ ಭಾಗವಹಿಸಿದ್ದು, ಕ್ರಿಸ್ಟಿಯಾನೋ ರೊನಾಲ್ಡೊ ಅವರೊಂದಿಗೆ ಅತಿ ಹೆಚ್ಚು ವಿಶ್ವಕಪ್ ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. 2021 ಮತ್ತು 2024 ರ ಕೋಪಾ ಅಮೆರಿಕ ಚಾಂಪಿಯನ್, 2022 ರ ವಿಶ್ವಕಪ್ ವಿಜೇತ. ಜೊತೆಗೆ 2014 ಮತ್ತು2022 ರ ವಿಶ್ವಕಪ್‌ಗಳಲ್ಲಿ ‘ಗೋಲ್ಡನ್ ಬಾಲ್’ ಹಾಗೂ 8 ಬಾರಿ ‘ಬ್ಯಾಲನ್ ಡಿ ಓರ್’ (Ballon d’Or) ಪ್ರಶಸ್ತಿ ಪಡೆದಿದ್ದಾರೆ.
ಇದನ್ನೂ ಓದಿ: ಮೈಮೇಲೆ ಮೂಡಿದ ಜರ್ಸಿ ನಂಬರ್: ಕೇವಲ ಶ್ರಮಕ್ಕೆ ಸಿಕ್ಕ ‘ಪರ್ಮನೆಂಟ್ ಜೆರ್ಸಿ ಇಂಪ್ರಿಂಟ್’ ಎಂದ ದೇವದತ್ ಪಡಿಕ್ಕಲ್
ನಿವೃತ್ತಿಯ ನಿರ್ಧಾರಕ್ಕೆ ವೈಯಕ್ತಿಕ ನೋವು:
ಮೆಸ್ಸಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿರುವಂತೆ, ಜುಲೈ 19 ರಂದು ವಿಶ್ವಕಪ್ ಫೈನಲ್ ಸೋಲಿನ ನಂತರವೇ ನಿವೃತ್ತಿಯ ಸಂದೇಶವನ್ನು ಬರೆದಿಟ್ಟಿದ್ದರು. ಆದರೆ, ಆಗಸ್ಟ್ ೮ ರಂದು ಅವರ ತಂದೆ ಜಾರ್ಜ್ ಮೆಸ್ಸಿ (೬೮) ಅನಾರೋಗ್ಯದಿಂದ ಮೃತಪಟ್ಟದ್ದು ಈ ನಿರ್ಧಾರವನ್ನು ಮತ್ತಷ್ಟು ದೃಢಗೊಳಿಸಿತು.
“ಯುವ ಆಟಗಾರರಿಗೆ ಅವಕಾಶ ಸಿಗಬೇಕು, ನಾನು ದೇಶಕ್ಕಾಗಿ ನೀಡಬಹುದಾದ ಎಲ್ಲವನ್ನೂ ನೀಡಿದ್ದೇನೆ. ಅಂತಾರಾಷ್ಟ್ರೀಯ ಪಂದ್ಯಗಳಿಂದ ದೂರವಿದ್ದರೂ ಅರ್ಜೆಂಟೀನಾ ತಂಡಕ್ಕೆ ನನ್ನ ಬೆಂಬಲ ಮುಂದುವರಿಯಲಿದೆ” ಎಂದು ಅವರು ಹೇಳಿದ್ದಾರೆ.
ಕ್ಲಬ್ ಫುಟ್‌ಬಾಲ್‌ನಲ್ಲಿ ಮುಂದುವರಿಕೆ:
ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿಧಾಯ ಹೇಳಿದ್ದರೂ, ಮೆಸ್ಸಿ ಫುಟ್‌ಬಾಲ್‌ನಿಂದ ಸಂಪೂರ್ಣವಾಗಿ ನಿವೃತ್ತರಾಗಿಲ್ಲ. ಮೇಜರ್ ಲೀಗ್ ಸಾಕರ್ (MLS) ನಲ್ಲಿ ಅಮೆರಿಕದ ಇಂಟರ್ ಮಿಯಾಮಿ (Inter Miami) ಕ್ಲಬ್ ಪರವಾಗಿ ಇನ್ನು 2 ವರ್ಷಗಳ ಒಪ್ಪಂದ ಹೊಂದಿದ್ದು, ಕ್ಲಬ್ ಪಂದ್ಯಗಳಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

