ನವದೆಹಲಿ: ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನದ ಮೊದಲ ದಿನವೇ ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಿರೋಧ ಪಕ್ಷಗಳ ತೀವ್ರ ಗದ್ದಲದ ನಡುವೆಯೇ ಮಹಿಳಾ ಮೀಸಲಾತಿ ಹಾಗೂ ಗಡಿ ನಿರ್ಣಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ-2026 ಅನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.
ದೇಶದ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆಯ ಒಟ್ಟು ಸದಸ್ಯರ ಬಲವನ್ನು ಈಗಿರುವ 543 ರಿಂದ 850 ಸ್ಥಾನಗಳಿಗೆ ಹೆಚ್ಚಿಸುವ ಕ್ರಾಂತಿಕಾರಿ ಪ್ರಸ್ತಾವನೆಯನ್ನು ಸರ್ಕಾರ ಮುಂದಿಟ್ಟಿದೆ.ಲೋಕಸಭೆಯ ಮಾದರಿಯಲ್ಲೇ ವಿವಿಧ ರಾಜ್ಯಗಳ ವಿಧಾನಸಭಾ ಸ್ಥಾನಗಳ ಸಂಖ್ಯೆಯನ್ನು ಸಹ ಹೆಚ್ಚಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

2029ರ ಸಾರ್ವತ್ರಿಕ ಚುನಾವಣೆಗಿಂತ ಮುಂಚಿತವಾಗಿ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅದರ ಆಧಾರದ ಮೇಲೆ ಹೊಸ ಸ್ಥಾನಗಳನ್ನು ಮತ್ತು ಶೇ. 33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಸರ್ಕಾರ ಯೋಜಿಸಿದೆ. ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ನಿಯಮಗಳಿಗೂ ಈ ಮಸೂದೆಯ ಮೂಲಕ ತಿದ್ದುಪಡಿ ತರಲಾಗುತ್ತಿದೆ.
ಇದನ್ನೂ ಓದಿ: ಸಂಸತ್ ವಿಶೇಷ ಅಧಿವೇಶನ ಇಂದಿನಿಂದ ಆರಂಭ: ಮಹಿಳಾ ಮೀಸಲಾತಿ ವಿಧೇಯಕ ಮಂಡನೆ; ಬಿಜೆಪಿ ಸಂಸದರಿಗೆ ಕಡ್ಡಾಯ ಹಾಜರಾತಿ ವಿಪ್ ಜಾರಿ!

ವಿಧೇಯಕ ಮಂಡನೆಯ ವೇಳೆ ವಿರೋಧ ಪಕ್ಷಗಳು ‘ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ’ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದವು. ಜನಸಂಖ್ಯೆ ಆಧಾರಿತ ವಿಂಗಡಣೆಯಿಂದ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಸ್ಥಾನಗಳು ಸಿಗುತ್ತವೆ ಎಂಬುದು ಪ್ರತಿಪಕ್ಷಗಳ ಪ್ರಮುಖ ಆಕ್ಷೇಪವಾಗಿದೆ.
ಇನ್ನಷ್ಟೂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

