ಎಲ್‌ಪಿಜಿ ಗ್ರಾಹಕರಿಗೆ ಬಿಗ್ ಅಲರ್ಟ್: ಜೂನ್ 30 ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಬ್ಸಿಡಿ ಬಂದ್

ಬೆಂಗಳೂರು: ದೇಶಾದ್ಯಂತ ಇರುವ ಕೋಟ್ಯಂತರ ಅಡುಗೆ ಅನಿಲ (LPG) ಗ್ರಾಹಕರಿಗೆ, ಅದರಲ್ಲೂ ಮುಖ್ಯವಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (PMUY) ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಮಹತ್ವದ ಗಡುವನ್ನು ನೀಡಿವೆ. ಯಾವುದೇ ಅಡೆತಡೆಯಿಲ್ಲದೆ ಎಲ್‌ಪಿಜಿ ಸಬ್ಸಿಡಿ ಸೌಲಭ್ಯವನ್ನು ಮುಂದುವರಿಸಲು ಜೂನ್ 30, 2026 ರೊಳಗೆ ಆಧಾರ್ ಆಧಾರಿತ ಇ-ಕೆವೈಸಿ (Aadhaar-based eKYC) ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಸೇರಿದಂತೆ ಪ್ರಮುಖ ತೈಲ ಮಾರ್ಕೆಟಿಂಗ್ ಕಂಪನಿಗಳು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ನಿಗದಿತ ದಿನಾಂಕದೊಳಗೆ ಇ-ಕೆವೈಸಿ ಮಾಡದಿದ್ದರೆ ಇಂಡೇನ್, ಭಾರತ್ ಗ್ಯಾಸ್ ಹಾಗೂ ಎಚ್‌ಪಿ ಗ್ಯಾಸ್ ಗ್ರಾಹಕರ ಸಬ್ಸಿಡಿ ಹಣವನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿವೆ. ಈಗಾಗಲೇ ಇ-ಕೆವೈಸಿ ಪ್ರಕ್ರಿಯೆ ಮುಗಿಸಿರುವ ಸಾಮಾನ್ಯ ಗ್ರಾಹಕರು ಇದನ್ನು ಮತ್ತೊಮ್ಮೆ ಮಾಡುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಜಾಗತಿಕ ತೈಲ ಬಿಕ್ಕಟ್ಟು ಮತ್ತು ಸರ್ಕಾರದ ಮುನ್ನೆಚ್ಚರಿಕೆ:

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ಜಗತ್ತಿನ ಶೇ. 20 ರಷ್ಟು ತೈಲ ಮತ್ತು ಅನಿಲ ಸಾಗಣೆಯನ್ನು ನಿಯಂತ್ರಿಸುವ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಜಲಮಾರ್ಗ ಬಂದ್ ಆಗಿರುವ ಕಾರಣ, ದೇಶದಲ್ಲಿ ಎಲ್‌ಪಿಜಿ ಕೊರತೆಯಾಗದಂತೆ ತಡೆಯಲು ಮತ್ತು ಸಬ್ಸಿಡಿ ವಿತರಣೆಯನ್ನು ಸುವ್ಯವಸ್ಥಿತಗೊಳಿಸಲು ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ಇ-ಕೆವೈಸಿ ಪ್ರಕ್ರಿಯೆಯು ಸಂಪೂರ್ಣ ಉಚಿತ, ಸುರಕ್ಷಿತ ಮತ್ತು ಸರಳವಾಗಿದೆ ಎಂದು ಕಂಪನಿಗಳು ತಿಳಿಸಿವೆ.

ನಿಮ್ಮ ಮೊಬೈಲ್‌ನಲ್ಲೇ ಇ-ಕೆವೈಸಿ ಪೂರ್ಣಗೊಳಿಸುವುದು ಹೇಗೆ?

ಮೂರು ಪ್ರಮುಖ ಗ್ಯಾಸ್ ಕಂಪನಿಗಳ ಗ್ರಾಹಕರು ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಬಹುದು:

1. ಇಂಡೇನ್ ಗ್ಯಾಸ್ (Indane Gas):

ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ ‘IndianOil ONE’ ಆಪ್ ಮತ್ತು ‘AadhaarFaceRD’ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.

IndianOil ONE ಆಪ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಬಳಸಿ ನೋಂದಣಿ (Register) ಮಾಡಿಕೊಳ್ಳಿ.

ಬಳಿಕ ನಿಮ್ಮ 16 ಅಕ್ಷರಗಳ ಎಲ್‌ಪಿಜಿ ಐಡಿ (LPG ID) ಅನ್ನು ಲಿಂಕ್ ಮಾಡಿ, ಗ್ರಾಹಕರ ವಿವರಗಳನ್ನು ಪರಿಶೀಲಿಸಿ.

ಆಪ್‌ನಲ್ಲಿರುವ ‘My Profile’ ವಿಭಾಗಕ್ಕೆ ಹೋಗಿ, ಅಲ್ಲಿ ‘re-KYC’ ಆಯ್ಕೆಯನ್ನು ಆರಿಸಿ, ನಿಮ್ಮ ಸಮ್ಮತಿ (Consent) ನೀಡಿ.

ಈಗ ನಿಮ್ಮ ಮೊಬೈಲ್ ಕ್ಯಾಮೆರಾ ಮೂಲಕ ಮುಖದ ಗುರುತು ಚಹರೆ (Face Authentication) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. (ಗಮನಿಸಿ: ನಿಮ್ಮ ಆಧಾರ್ ಬಯೋಮೆಟ್ರಿಕ್ ಲಾಕ್ ಆಗಿದ್ದರೆ ಮೊದಲು ಅದನ್ನು ಅನ್‌ಲಾಕ್ ಮಾಡಿಕೊಳ್ಳಿ).

2. ಭಾರತ್ ಗ್ಯಾಸ್ (Bharat Gas):

ಭಾರತ್ ಗ್ಯಾಸ್ ಗ್ರಾಹಕರು ಪ್ಲೇ ಸ್ಟೋರ್‌ನಿಂದ ‘Hello BPCL’ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಆಪ್‌ನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಿ.

ಹೋಮ್ ಪೇಜ್‌ನಲ್ಲಿ ಕಾಣಿಸುವ ‘e-KYC’ ಆಯ್ಕೆಯನ್ನು ಕ್ಲಿಕ್ ಮಾಡಿ.

ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ (OTP) ಅನ್ನು ನಮೂದಿಸಿ, ನಿಯಮ ಮತ್ತು ನಿಬಂಧನೆಗಳನ್ನು ಒಪ್ಪಿಕೊಂಡು ದೃಢೀಕರಣ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿ.

ಇದನ್ನೂ ಓದಿ; ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು; ವಕೀಲರನ್ನು ಆರೋಪಿಗಳನ್ನಾಗಿ ಮಾಡುವ ಪ್ರವೃತ್ತಿಗೆ ಬೇಸರ

3. ಎಚ್‌ಪಿ ಗ್ಯಾಸ್ (HP Gas):

ಎಚ್‌ಪಿ ಗ್ಯಾಸ್ ಬಳಕೆದಾರರು ‘HP Pay’ ಆಪ್ ಮತ್ತು ‘Aadhaar FaceRD’ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.

HP Pay ಆಪ್‌ನಲ್ಲಿ ರಿಜಿಸ್ಟರ್ ಮಾಡಿ, 4 ಅಂಕಿಯ ಎಂ-ಪಿನ್ (MPIN) ಸೆಟ್ ಮಾಡಿಕೊಳ್ಳಿ.

ಲಾಗಿನ್ ಆದ ನಂತರ ‘MY HP’ ವಿಭಾಗಕ್ಕೆ ಹೋಗಿ, ‘LPG Services’ ಆಯ್ಕೆಮಾಡಿ, ಅಲ್ಲಿ ‘e-KYC’ ಕ್ಲಿಕ್ ಮಾಡಿ.

ನಿಯಮಗಳನ್ನು ಒಪ್ಪಿದ ನಂತರ ‘Capture Face’ ಫೀಚರ್ ಬಳಸಿ. ಇದು ನಿಮ್ಮನ್ನು ಆಧಾರ್ ಫೇಸ್ ಆರ್​ಡಿ ಆಪ್‌ಗೆ ಮರುನಿರ್ದೇಶಿಸುತ್ತದೆ, ಅಲ್ಲಿ ನಿಮ್ಮ ಮುಖದ ಸ್ಕ್ಯಾನ್ ಮೂಲಕ ಬಯೋಮೆಟ್ರಿಕ್ ದೃಢೀಕರಣ ಯಶಸ್ವಿಯಾಗುತ್ತದೆ.

ಗ್ರಾಹಕರು ತಮ್ಮ ಹತ್ತಿರದ ಗ್ಯಾಸ್ ವಿತರಕರು (Distributors) ಅಥವಾ ಮನೆಗೆ ಸಿಲಿಂಡರ್ ತಲುಪಿಸುವ ಡೆಲಿವರಿ ಸಿಬ್ಬಂದಿ ಸಹಾಯದ ಮೂಲಕವೂ ಈ ಇ-ಕೆವೈಸಿಯನ್ನು ನೇರವಾಗಿ ಮಾಡಿಸಿಕೊಳ್ಳಬಹುದು.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು