ಮಂಗಳೂರು: ವಾಹನ ಕಳ್ಳತನ ವಿಮಾ ಕ್ಲೇಮ್ ವಿವಾದದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯವು ಶ್ರೀರಾಮ್ ಜನರಲ್ ಇನ್ಶುರೆನ್ಸ್ ಕಂಪನಿಗೆ ವಾಹನದ ಮೌಲ್ಯ, ದಂಡ, ನ್ಯಾಯಾಲಯದ ಶುಲ್ಕ ಮತ್ತು ಬಡ್ಡಿ ಸೇರಿದಂತೆ ಸಂಪೂರ್ಣ ಪರಿಹಾರವನ್ನು ಪಾವತಿಸುವಂತೆ ಆದೇಶಿಸಿದೆ.
ಮಂಗಳೂರಿನ ನಿವಾಸಿಯಾದ ಸಾಂತಪ್ಪ ಯು ಎಂಬವರು ಗೂಡ್ಸ್ ಟೆಂಪೋ ಹೊಂದಿದ್ದಾರೆ. 2023ರ ಡಿಸೆಂಬರ್ 26 ರಂದು ಸಂಜೆ, ಕೆಲಸ ಮುಗಿಸಿದ ನಂತರ, ಅವರು ಪಡೀಲ್‌ನಲ್ಲಿ ವಾಹನವನ್ನು ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಸ್ಥಳಕ್ಕೆ ಬಂದು ನೋಡಿದಾಗ ವಾಹನ ಕಳವಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಂಪೂರ್ಣ ಹುಡುಕಾಟ ನಡೆಸಿದರೂ ವಾಹನ ಪತ್ತೆಯಾಗಿಲ್ಲ.

ಕಳುವಾದ ವಾಹನಕ್ಕೆ ವಿಮೆ ಮಾಡಿದ ಮೊತ್ತವನ್ನು ಪಡೆಯಲು ಸಾಂತಪ್ಪ ಎಲ್ಲಾ ಅಗತ್ಯ ದಾಖಲೆಗಳನ್ನು ಮತ್ತು ವಿಮಾ ಕಂಪನಿಗೆ ಕ್ಲೇಮ್ ಸಲ್ಲಿಸಿದ್ದರು. ಆದರೆ, ಶ್ರೀರಾಮ್ ಜನರಲ್ ಇನ್ಶುರೆನ್ಸ್ ಕಳ್ಳತನದ ಸಮಯದಲ್ಲಿ ವಾಹನವು ಮಾನ್ಯವಾದ ಫಿಟ್‌ನೆಸ್ ಪ್ರಮಾಣಪತ್ರವನ್ನು ಹೊಂದಿಲ್ಲ ಎಂಬ ಕಾರಣ ಉಲ್ಲೇಖಿಸಿ ಕ್ಲೇಮ್ ತಿರಸ್ಕರಿಸಿತ್ತು.
ಇದನ್ನೂ ಓದಿ: ಅಂಗಾಂಗ ದಾನದಲ್ಲಿ ದಾಖಲೆ ಬರೆದ ಕರ್ನಾಟಕ; ರಾಷ್ಟ್ರದಲ್ಲಿ ಎಷ್ಟನೇ ಸ್ಥಾನ ಗೊತ್ತಾ?

ಹೀಗಾಗಿ ಸಾಂತಪ್ಪ ಅವರು ಗ್ರಾಹಕರ ಕೋರ್ಟ್ ಬಾಗಿಲು ತಟ್ಟಿದರು. ದೂರನ್ನು ಕೂಲಂಕಷವಾಗಿ ಪರಿಶೀಲಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು, ವಾಹನವನ್ನು ದೈನಂದಿನ ಕಾರ್ಯಾಚರಣೆಯ ನಂತರ ನಿಲ್ಲಿಸಲಾಗಿತ್ತು ಮತ್ತು ಅದು ಚಾಲನೆಯಲ್ಲಿರುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ, ಫಿಟ್‌ನೆಸ್ ಪ್ರಮಾಣಪತ್ರ ಹೊಂದದಿರುವುದು ಕಳ್ಳತನ ಅಥವಾ ಕ್ಲೇಮ್ ನಿರಾಕರಣೆಗೆ ಅಪ್ರಸ್ತುತವಾಗಿದೆ. ವಿಮಾ ಕಂಪನಿಯು ಸರಿಯಾದ ಕ್ಲೇಮ್ ಅನ್ನು ನಿರಾಕರಿಸುವ ಮೂಲಕ ಸೇವೆಯಲ್ಲಿನ ಕೊರತೆಯನ್ನು ಪ್ರದರ್ಶಿಸಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಅಲ್ಲದೆ, ನ್ಯಾಯಾಲಯವು ವಾಹನದ ವಿಮೆ ಮಾಡಿದ ಮೌಲ್ಯ, 20,000 ರೂ. ದಂಡ, 10,000 ರೂ. ನ್ಯಾಯಾಲಯದ ವೆಚ್ಚ ಮತ್ತು ವಾರ್ಷಿಕ 6% ಬಡ್ಡಿಯನ್ನು ಪಾವತಿಸಲು ವಿಮಾ ಕಂಪನಿಗೆ ಆದೇಶಿಸಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

