ಮಂಗಳೂರು: ಪಶ್ಚಿಮ ಘಟ್ಟದ ಸುಬ್ರಹ್ಮಣ್ಯ-ಸಕಲೇಶಪುರ ರೈಲ್ವೆ ಮಾರ್ಗದ ಯೇಡಕುಮಾರಿ ಮತ್ತು ಸಿರಿವಾಗಿಲು ರೈಲು ನಿಲ್ದಾಣಗಳ ನಡುವೆ ಶನಿವಾರ ರಾತ್ರಿ ಭಾರಿ ಗುಡ್ಡ ಕುಸಿತ ಉಂಟಾಗಿದೆ. ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಒಂದೇ ಸಮನೆ ಮತ್ತೆ ಮತ್ತೆ ಮಣ್ಣು ಕುಸಿಯುತ್ತಿರುವುದರಿಂದ ಮಂಗಳೂರು-ಬೆಂಗಳೂರು ಹಾಗೂ ಮುರುಡೇಶ್ವರ ಮಾರ್ಗದ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
ಸ್ಥಳದಲ್ಲಿ ರೈಲ್ವೆ ಹಳಿ ತೆರವು ಹಾಗೂ ದುರಸ್ತಿ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳಲು ನಿರೀಕ್ಷೆಗಿಂತ ಹೆಚ್ಚಿನ ಸಮಯ ತಗುಲಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರದ್ದಾದ ಹಾಗೂ ಭಾಗಶಃ ರದ್ದಾದ ರೈಲುಗಳ ವಿವರ:
ಸಂಪೂರ್ಣ ರದ್ದು:
ರೈಲು ಸಂಖ್ಯೆ 16540 (ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್‌ಪ್ರೆಸ್)
ರೈಲು ಸಂಖ್ಯೆ 16575 (ಯಶವಂತಪುರ – ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್)
ಭಾಗಶಃ ರದ್ದು (ಹಾಸನದಲ್ಲೇ ಪ್ರಯಾಣ ಅಂತ್ಯ):
ರೈಲು ಸಂಖ್ಯೆ 16585 (ಎಸ್‌ಎಂವಿಟಿ ಬೆಂಗಳೂರು – ಮುರುಡೇಶ್ವರ ಎಕ್ಸ್‌ಪ್ರೆಸ್): ಆಗಸ್ಟ್ 1 ರಂದು ಬೆಂಗಳೂರಿನಿಂದ ಹೊರಟಿದ್ದ ಈ ರೈಲನ್ನು ಮುರುಡೇಶ್ವರದ ಬದಲಿಗೆ ಹಾಸನದಲ್ಲೇ ಭಾಗಶಃ ರದ್ದುಗೊಳಿಸಿ ಸ್ಥಗಿತಗೊಳಿಸಲಾಯಿತು.
ರೈಲು ಸಂಖ್ಯೆ 16511 (ಕೆಎಸ್‌ಆರ್ ಬೆಂಗಳೂರು – ಕೋಝಿಕ್ಕೋಡ್ ಎಕ್ಸ್‌ಪ್ರೆಸ್): ಬೆಂಗಳೂರಿನಿಂದ ಹೊರಟಿದ್ದ ಈ ರೈಲನ್ನು ಕೋಝಿಕ್ಕೋಡ್ ಬದಲಿಗೆ ಹಾಸನದಲ್ಲೇ ಭಾಗಶಃ ರದ್ದುಗೊಳಿಸಲಾಗಿದೆ.
ಇದನ್ನೂ ಓದಿ:ಬಂಟ್ವಾಳ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: 26.18 ಕೋಟಿ ರೂ. ವೆಚ್ಚದ ನೂತನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ಸ್ಥಳದಲ್ಲಿ ಭರದಿಂದ ಸಾಗಿರುವ ತೆರವು ಕಾರ್ಯ:
ಘಟನಾ ಸ್ಥಳಕ್ಕೆ ಈಗಾಗಲೇ ಪರಿಹಾರ ಸಾಮಗ್ರಿಗಳನ್ನೊಳಗೊಂಡ ವಿಶೇಷ ರೈಲು ಹಾಗೂ ಪರಿಣಿತ ತಾಂತ್ರಿಕ ತಂಡಗಳು ತಲುಪಿವೆ. ಮಣ್ಣು ತೆರವುಗೊಳಿಸುವ ಕಾರ್ಯಕ್ಕೆ ಹೆಚ್ಚಿನ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳನ್ನು ನಿಯೋಜಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

