ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಘಟಕದಲ್ಲಿ ಕಳೆದ ಸೆಪ್ಟೆಂಬರ್ 30 ರಂದು ಸಂಭವಿಸಿದ್ದ ಭೀಕರ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಒಪ್ಪಂದದ ನೌಕರ ರಾಜೇಶ್ ಡಿಸೋಜಾ (45) ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ (ಅಕ್ಟೋಬರ್ 17) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಮೃತ ರಾಜೇಶ್ ಡಿಸೋಜಾ ಸುರತ್ಕಲ್ನ ಇಡ್ಯಾ ಗ್ರಾಮದ ಕಾನ ನಿವಾಸಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಎಂಆರ್ಪಿಎಲ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದರು. ಇವರು ಬ್ಯಾಪ್ಟಿಸ್ಟ್ ಡಿಸೋಜಾ ಅವರ ಐವರು ಮಕ್ಕಳಲ್ಲಿ (ಎರಡು ಗಂಡು ಹಾಗೂ ಮೂರು ಹೆಣ್ಣು) ಒಬ್ಬರಾಗಿದ್ದು, ಅವಿವಾಹಿತರಾಗಿದ್ದರು.
ಸೆಪ್ಟೆಂಬರ್ 30 ರಂದು ಎಂಆರ್ಪಿಎಲ್ ಫೇಸ್-3 ರ ಕೋಕರ್ ಹೈಡ್ರೋ ಟ್ರೀಟಿಂಗ್ ಯುನಿಟ್ (CHTU) ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿತ್ತು. ಘಟನಾ ಸ್ಥಳದಲ್ಲೇ ಹಳೇಯಂಗಡಿ ಮೂಲದ ಮನೀಶ್ ಎಂಬುವವರು ಜೀವ ತೆರೆದಿದ್ದರು.ಸ್ಫೋಟದಲ್ಲಿ ತೀವ್ರ ಸುಟ್ಟ ಗಾಯಗಳಿಗೊಳಗಾಗಿದ್ದ ರಾಜೇಶ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಶನಿವಾರ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ : ಮಂಗಳೂರು ಎಂಆರ್ಪಿಎಲ್ ಸ್ಫೋಟ ದುರಂತ: ನಾಪತ್ತೆಯಾಗಿದ್ದ ಮನೀಶ್ ಕರ್ಕರ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವವಾಗಿ ಪತ್ತೆ
ಮೃತರ ಮೃತದೇಹವನ್ನು ಶನಿವಾರ ಸಂಜೆ ನಗರದ ವೆನ್ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಪ್ರಕ್ರಿಯೆಗಳು ಮುಗಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

