Breaking News

ದಕ್ಷಿಣ ಕನ್ನಡ ಅಭಿವೃದ್ಧಿಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಬ್ಲೂಪ್ರಿಂಟ್: 5 ವರ್ಷ ಅವಧಿಗೆ ಗನ್ ಲೈಸೆನ್ಸ್ ನವೀಕರಣಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಪುತ್ತೂರು: ಪುತ್ತೂರು ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ, ಗ್ರಾಮೀಣ ಮೂಲಸೌಕರ್ಯ, ಕೃಷಿಕರ ತುರ್ತು ಸಮಸ್ಯೆಗಳು ಮತ್ತು ಆರೋಗ್ಯ ಕ್ಷೇತ್ರದ ನವೀಕರಣಕ್ಕೆ ಆಗ್ರಹಿಸಿ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಸುದೀರ್ಘ ಮನವಿ ಪತ್ರ ಸಲ್ಲಿಸಿದರು.

ಕರಾವಳಿ ಭಾಗದ ರೈತರು ಅನುಭವಿಸುತ್ತಿರುವ ಗನ್ ಲೈಸೆನ್ಸ್ ಗೊಂದಲ, ರಸ್ತೆ ಅವ್ಯವಸ್ಥೆ ಹಾಗೂ ಆಸ್ಪತ್ರೆ ಮೂಲಸೌಕರ್ಯಗಳ ಕುರಿತು ಶಾಸಕರು ಗಮನ ಸೆಳೆದಿದ್ದು, ಸರ್ಕಾರದಿಂದ ಧನಾತ್ಮಕ ಸ್ಪಂದನೆ ದೊರೆತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 13,000ಕ್ಕೂ ಅಧಿಕ ರೈತರು ಕಾಡುಪ್ರಾಣಿಗಳ ಹಾವಳಿಯಿಂದ ಅಡಿಕೆ, ರಬ್ಬರ್ ಹಾಗೂ ತೋಟಗಾರಿಕಾ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕಾನೂನುಬದ್ಧ ಕೋವಿ ಪರವಾನಗಿ ಹೊಂದಿದ್ದಾರೆ. ಇತ್ತೀಚೆಗೆ ನವೀಕರಣ ವೇಳೆ ಬೆಳೆ ಹಾನಿ ಸಾಕ್ಷ್ಯ ಹಾಗೂ ಅನಗತ್ಯ ದಾಖಲೆಗಳನ್ನು ಕೇಳಿ ಕಿರುಕುಳ ನೀಡಲಾಗುತ್ತಿರುವ ಬಗ್ಗೆ ಶಾಸಕರು ಕಳವಳ ವ್ಯಕ್ತಪಡಿಸಿದರು.

ಯಾವುದೇ ಎನ್‌ಒಸಿ (NOC) ಕಿರಿಕಿರಿಯಿಲ್ಲದೆ ಹಿಂದೆ ಇದ್ದ ನಿಯಮದಂತೆ 5 ವರ್ಷಗಳ ಅವಧಿಗೆ ಪರವಾನಗಿ ನವೀಕರಿಸುವ ವ್ಯವಸ್ಥೆ ಮುಂದುವರಿಸುವುದಾಗಿ ಸಿಎಂ ಸಕಾರಾತ್ಮಕ ಭರವಸೆ ನೀಡಿದ್ದಾರೆ. ಬಾಕಿ ಕಡತಗಳ ತ್ವರಿತ ವಿಲೇವಾರಿಗೆ ತಾಲೂಕುವಾರು ‘ಕೋವಿ ಅದಾಲತ್’ ನಡೆಸುವಂತೆ ಶಾಸಕರು ಒತ್ತಾಯಿಸಿದ್ದಾರೆ.

ಕಡಬ/ಪುತ್ತೂರು ತಾಲೂಕಿನ ಕೊಯಿಲದಲ್ಲಿರುವ ವಿಶಾಲ ಜಾನುವಾರು ಸಂವರ್ಧನಾ ಕೇಂದ್ರದ ಜಾಗದಲ್ಲಿ ಮಂಜೂರಾಗಿರುವ ಪಶುವೈದ್ಯಕೀಯ ಕಾಲೇಜು ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಿ, ಭಾರತೀಯ ಪಶುವೈದ್ಯಕೀಯ ಮಂಡಳಿಯ (VCI) ಅನುಮೋದನೆಯೊಂದಿಗೆ ಮುಂಬರುವ ಶೈಕ್ಷಣಿಕ ಸಾಲಿನಲ್ಲೇ ಕಾಲೇಜು ಆರಂಭಿಸಬೇಕು. ಜೊತೆಗೆ ಸುಧಾರಿತ ತಳಿ ಸಂವರ್ಧನೆ ಮತ್ತು ರೋಗ ತಪಾಸಣಾ ಕೇಂದ್ರ ಒಳಗೊಂಡ ಸಮಗ್ರ ‘ಪಶುಸಂಗೋಪನಾ ಪಾರ್ಕ್’ ಸ್ಥಾಪನೆಗೆ ವಿಶೇಷ ಅನುದಾನ ನೀಡುವಂತೆ ಕೋರಿದರು.

ಕರಾವಳಿ-ಮಲೆನಾಡು ಭಾಗದ ಗ್ರಾಮೀಣ, ಎಂಡಿಆರ್ ಹಾಗೂ ಪಿಡಬ್ಲ್ಯೂಡಿ ರಸ್ತೆಗಳು ಮಳೆಯಿಂದ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಶಾಲಾ ಮಕ್ಕಳು ಹಾಗೂ ಆಂಬುಲೆನ್ಸ್ ಸಂಚಾರಕ್ಕೂ ತೊಂದರೆಯಾಗಿದೆ. ಕೇವಲ ತೇಪೆ ಹಚ್ಚುವ ಕಾಮಗಾರಿಯಿಂದ ಸಾರ್ವಜನಿಕರ ಹಣ ಪೋಲಾಗುತ್ತಿದ್ದು, ವೈಜ್ಞಾನಿಕ ಚರಂಡಿ ವ್ಯವಸ್ಥೆಯುಳ್ಳ ಕಾಂಕ್ರೀಟ್ ರಸ್ತೆಗಳು ಅಥವಾ ಜಿಯೋ-ಟೆಕ್ಸ್‌ಟೈಲ್ ತಂತ್ರಜ್ಞಾನದ ಶಾಶ್ವತ ಸರ್ವಋತು ರಸ್ತೆ ನಿರ್ಮಾಣಕ್ಕೆ ವಿಶೇಷ ಮೂಲಸೌಕರ್ಯ ಅನುದಾನ ಪ್ಯಾಕೇಜ್ ಬಿಡುಗಡೆ ಮಾಡಲು ಆಗ್ರಹಿಸಿದರು.

ಪುತ್ತೂರು ತಾಲೂಕಿನ ವಿಟ್ಲ ಹಾಗೂ ಉಪ್ಪಿನಂಗಡಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಆಯುಷ್ ವೈದ್ಯಾಧಿಕಾರಿ ಹುದ್ದೆಗಳನ್ನು ಕನಿಷ್ಠ ಹೊರಗುತ್ತಿಗೆ ಆಧಾರದಲ್ಲಾದರೂ ತಕ್ಷಣವೇ ಭರ್ತಿ ಮಾಡಬೇಕು. ಬನ್ನೂರು ಗ್ರಾಮದ ಕುಂಟಾಣದಲ್ಲಿ ಆಯುಷ್ ಇಲಾಖೆಗೆ ಮಂಜೂರಾಗಿರುವ 5 ಎಕರೆ ಜಮೀನಿನಲ್ಲಿ 100 ಹಾಸಿಗೆಗಳ ಆಯುರ್ವೇದ ಬೋಧನಾ ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣಕ್ಕೆ ಶೀಘ್ರ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಶಾಸಕರು ವಿನಂತಿಸಿದರು.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ: ಆರ್‌ಎಸ್‌ಎಸ್ ವರ್ಸಸ್ ಕರ್ನಾಟಕ ಸರ್ಕಾರ: ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದ ಗೃಹ ಸಚಿವ

ಕೋವಿಡ್ ನಂತರ ಯುವಜನತೆಯಲ್ಲಿ ಹೃದಯಾಘಾತ ಹಾಗೂ ನರಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಆಸ್ಪತ್ರೆಗಳಲ್ಲಿ ಧೂಳು ಹಿಡಿಯುತ್ತಿರುವ ಕೋಟ್ಯಂತರ ರೂಪಾಯಿ ಮೌಲ್ಯದ ವೆಂಟಿಲೇಟರ್‌ಗಳು ಹಾಗೂ ಆಕ್ಸಿಜನ್ ಘಟಕಗಳನ್ನು ತಕ್ಷಣವೇ ದುರಸ್ತಿಗೊಳಿಸಿ ‘ಕ್ರಿಟಿಕಲ್ ಕೇರ್ ಬ್ಲಾಕ್’ಗಳನ್ನು ಸುಸಜ್ಜಿತವಾಗಿಡಬೇಕು. ಸಾಂಕ್ರಾಮಿಕದ ವೇಳೆ ದುಡಿದ ಹೊರಗುತ್ತಿಗೆ ನರ್ಸ್‌ಗಳು ಹಾಗೂ ಲ್ಯಾಬ್ ಟೆಕ್ನಿಷಿಯನ್‌ಗಳ ಬಾಕಿ ಗೌರವಧನ ಬಿಡುಗಡೆ ಮಾಡಿ ಸೇವಾ ಭದ್ರತೆ ಒದಗಿಸಬೇಕೆಂದು ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *