Breaking News

ಮಳೆಗಾಲದಲ್ಲಿತಲೆನೋವು ಹೆಚ್ಚಾಗುತ್ತದೆಯೇ?: ತಜ್ಞ ವೈದ್ಯರು ನೀಡುವ ಮುಖ್ಯ ಮಾಹಿತಿ ಹಾಗೂ ಸಲಹೆಗಳು

ಮಳೆಗಾಲದ ಸೂಚನೆಯಾಗಿ ವಾತಾವರಣ ತಂಪಾಗುವುದು, ಮೋಡ ಕವಿಯುವುದು ಮತ್ತು ತೇವಭರಿತ ಗಾಳಿ ಬೀಸುವುದು ಸಾಮಾನ್ಯ. ಆದರೆ, ಮೈಗ್ರೇನ್ (Migraine) ತಲೆನೋವಿನ ಸಮಸ್ಯೆಯಿಂದ ಬಳಲುತ್ತಿರುವ ಕೆಲವರಿಗೆ ಮಳೆ ಬರುವ ಮುನ್ನವೇ ತೀವ್ರವಾದ ತಲೆನೋವು, ವಾಕರಿಕೆ ಹಾಗೂ ಬೆಳಕು ಅಥವಾ ಶಬ್ದವನ್ನು ಸಹಿಸಲಾಗದ ಕಿರಿಕಿರಿ ಪ್ರಾರಂಭವಾಗುತ್ತದೆ.

ಹಾಗಾದರೆ, ಮಳೆಗಾಲಕ್ಕೂ ಮೈಗ್ರೇನ್ ತಲೆನೋವಿಗೂ ನಿಜಕ್ಕೂ ಸಂಬಂಧವಿದೆಯೇ? ದೆಹಲಿಯ ಪಿಎಸ್‌ಆರ್‌ಐ (PSRI) ಆಸ್ಪತ್ರೆಯ ಹಿರಿಯ ನರರೋಗ ತಜ್ಞ ಡಾ. ಭಾಸ್ಕರ್ ಶುಕ್ಲಾ ಅವರು ನೀಡಿದ ಪ್ರಮುಖ ವಿವರಣೆಗಳು ಹಾಗೂ ಮಾರ್ಗದರ್ಶನ ಇಲ್ಲಿದೆ. ಈ ಬಗ್ಗೆ ನ್ಯೂಸ್​​​9 ಒಂದು ವರದಿಯನ್ನು ಮಾಡಿದೆ.

ಮಳೆ ಮತ್ತು ವಾತಾವರಣದ ವೈಪರೀತ್ಯ ಮೈಗ್ರೇನ್‌ಗೆ ಕಾರಣವೇ?

ಮಳೆ ಹಾಗೂ ಬಿರುಗಾಳಿ ಬೀಸುವ ಸಂದರ್ಭದಲ್ಲಿ ವಾತಾವರಣದ ಒತ್ತಡದಲ್ಲಿ ಏರಿಳಿತಗಳಾಗುತ್ತವೆ. ಈ ವೈಪರೀತ್ಯವು ಮೈಗ್ರೇನ್ ಪೀಡಿತರಲ್ಲಿ ತಲೆನೋವಿನ ಪ್ರಚೋದಕವಾಗಿ ಕೆಲಸ ಮಾಡಬಹುದು. ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುತ್ತದೆ ಹಾಗೂ ಬೆವರುವಿಕೆ ಇರುತ್ತದೆ. ಆದರೆ ತಂಪಾದ ವಾತಾವರಣವಿರುವುದರಿಂದ ಜನರು ಸಾಕಷ್ಟು ನೀರು ಕುಡಿಯುವುದಿಲ್ಲ. ಈ ನಿರ್ಜಲೀಕರಣವು ಮೈಗ್ರೇನ್ ಬರಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಮಳೆಗಾಲದಲ್ಲಿ ಬೆಳಿಗ್ಗೆ ತಡವಾಗಿ ಏಳುವುದು, ದೈಹಿಕ ವ್ಯಾಯಾಮ ಕಡಿಮೆಯಾಗುವುದು, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು ಹಾಗೂ ಅತಿಯಾಗಿ ಚಹಾ ಅಥವಾ ಕಾಫಿ ಸೇವಿಸುವುದು ತಲೆನೋವನ್ನು ಹೆಚ್ಚಿಸಬಹುದು. ಮಳೆಗಾಲದಲ್ಲಿ ಮನೆಗಳಲ್ಲಿ ತೇವ ಹೆಚ್ಚಾಗಿ ಶಿಲೀಂಧ್ರ ಬೆಳೆಯುವುದು, ಕೊಠಡಿಗಳಲ್ಲಿ ಗಾಳಿ ಆಡದೆ ಬರುವ ದುರ್ವಾಸನೆ ಅಥವಾ ಘಾಟು ವಾಸನೆಗಳು ಮೈಗ್ರೇನ್ ಅನ್ನು ಪ್ರಚೋದಿಸಬಹುದು.

ಮಳೆಗಾಲದಲ್ಲಿ ತಲೆನೋವು ಬಂದ ತಕ್ಷಣ ಪದೇ ಪದೇ ವೈದ್ಯರ ಸಲಹೆಯಿಲ್ಲದೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅತ್ಯಂತ ಅಪಾಯಕಾರಿ. ಅತಿಯಾದ ಮಾತ್ರೆಗಳ ಬಳಕೆಯು ‘ಮೆಡಿಕೇಶನ್ ಒವರ್‌ಯೂಸ್ ಹೆಡ್‌ಏಕ್’ (Medication-Overuse Headache) ಎಂಬ ಮತ್ತೊಂದು ರೀತಿಯ ತೀವ್ರ ತಲೆನೋವಿಗೆ ಕಾರಣವಾಗಬಹುದು. ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಮಾತ್ರೆಗಳ ಅಗತ್ಯ ಬಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಮೈಗ್ರೇನ್ ತಡೆಯಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:

ಸಾಕಷ್ಟು ನೀರು ಕುಡಿಯಿರಿ: ಬಾಯಾರಿಕೆ ಇಲ್ಲದಿದ್ದರೂ ನಿಯಮಿತವಾಗಿ ನೀರು ಕುಡಿಯುವ ಅಭ್ಯಾಸವಿಟ್ಟುಕೊಳ್ಳಿ.

ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ: ಬೆಳಗಿನ ಉಪಹಾರ ಸೇರಿದಂತೆ ಯಾವುದೇ ಸಮಯದ ಊಟವನ್ನು ತಪ್ಪಿಸಬೇಡಿ.

ನಿದ್ರೆಯ ಶಿಸ್ತು: ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಚಹಾ/ಕಾಫಿ ನಿಯಂತ್ರಣ: ಅತಿಯಾಗಿ ಟೀ/ಕಾಫಿ ಕುಡಿಯುವುದು ಅಥವಾ ದಿಢೀರನೆ ಅದನ್ನು ನಿಲ್ಲಿಸುವುದನ್ನು ತಡೆಯಿರಿ.

ತಲೆನೋವಿನ ದಿನಚರಿ (Headache Diary): ನಿಮಗಾವ ಸಂದರ್ಭದಲ್ಲಿ ತಲೆನೋವು ಬರುತ್ತದೆ ಎಂಬುದನ್ನು ಗುರುತಿಸಲು ‘ಲಕ್ಷಣಗಳ ದಿನಚರಿ’ ನಿರ್ವಹಿಸಿ.

ಇದನ್ನೂ ಓದಿ: ಏಮ್ಸ್ ವೈದ್ಯರ ಅದ್ಭುತ ಸಾಧನೆ: 209 ಕೆಜಿ ತೂಕವಿದ್ದ ವ್ಯಕ್ತಿಗೆ ಯಶಸ್ವಿ ಬೆರಿಯಾಟ್ರಿಕ್ ಸರ್ಜರಿ, 49 ಕೆಜಿ ತೂಕ ಇಳಿತ

ವೈದ್ಯಕೀಯ ತುರ್ತು ಪರಿಸ್ಥಿತಿ ಯಾವಾಗ?

ನಿಮ್ಮ ತಲೆನೋವು ಕೇವಲ ಮೈಗ್ರೇನ್ ಅಥವಾ ವಾತಾವರಣದ ಬದಲಾವಣೆಯಿಂದ ಬಂದಿದ್ದಲ್ಲ ಎಂದು ಭಾವಿಸಲು ಈ ಕೆಳಗಿನ ಲಕ್ಷಣಗಳಿದ್ದರೆ ತಕ್ಷಣವೇ ತುರ್ತು ವೈದ್ಯಕೀಯ ನೆರವು ಪಡೆಯಿರಿ:

ದಿಢೀರನೆ ವಿಪರೀತ ಮಟ್ಟಕ್ಕೆ ತಲುಪುವ ತೀವ್ರ ತಲೆನೋವು.

ತಲೆನೋವಿನ ಜೊತೆಗೆ ಶರೀರದ ಭಾಗಗಳಲ್ಲಿ ನಿಶ್ಯಕ್ತಿ ಅಥವಾ ಮರಗಟ್ಟುವಿಕೆ .

ಮಾತು ತೊದಲಿಸುವುದು, ಗೊಂದಲ, ದೃಷ್ಟಿ ಮಂದವಾಗುವುದು ಅಥವಾ ಮಸುಕಾಗುವುದು.

ಕುತ್ತಿಗೆ ಗಿಡಸಾಗುವುದು ಮತ್ತು ಜ್ವರದೊಂದಿಗೆ ತಲೆನೋವು ಬರುವುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *