ಬೆಂಗಳೂರು: “ನಾನು ಯಾವತ್ತೂ ಅಧಿಕಾರ, ಹಣದ ಹಿಂದೆ ಹೋದವನಲ್ಲ. ಆಸ್ತಿ-ಪಾಸ್ತಿ ಮಾಡಿಕೊಳ್ಳಬೇಕೆಂಬ ಯೋಚನೆಯನ್ನೂ ಮಾಡಿದವನಲ್ಲ. ನನ್ನ ರಾಜಕೀಯ ಜೀವನ ಒಂದು ತೆರೆದ ಪುಸ್ತಕ,”- ಹೀಗೆಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಸಿದ್ದರಾಮಯ್ಯ ಅವರು ಅತ್ಯಂತ ಭಾವುಕರಾದರು. ಹೈಕಮಾಂಡ್ ಸೂಚನೆಯ ಬೆನ್ನಲ್ಲೇ ರಾಜೀನಾಮೆ ಪತ್ರ ಸಲ್ಲಿಸಿ ಗೃಹಕಚೇರಿ ‘ಕೃಷ್ಣಾ’ದಲ್ಲಿ ಹಮ್ಮಿಕೊಂಡಿದ್ದ ಕಡೆಯ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ಸುದೀರ್ಘ 50 ವರ್ಷಗಳ ರಾಜಕೀಯ ಪಯಣವನ್ನು ನೆನೆದು ಕಣ್ಣಾಲಿಗಳನ್ನು ತುಂಬಿಕೊಂಡರು.
ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ವಿಚಾರವನ್ನು ಅಧಿಕೃತಪಡಿಸಿದ ಸಿದ್ದರಾಮಯ್ಯ, “ಹೈಕಮಾಂಡ್ ಸೂಚಿಸಿದ ತಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ನಾನು ಮೊದಲೇ ಹೇಳಿದ್ದೆ. ಮೊನ್ನೆ ತಾನೆ ಹೈಕಮಾಂಡ್‌ನವರು ರಾಜೀನಾಮೆ ನೀಡುವಂತೆ ತಿಳಿಸಿದ್ದರು. ಅದರಂತೆ ನಾಡಿದ್ದು ನೀಡುವುದಾಗಿ ಹೇಳಿದ್ದೆ, ಇಂದು ಅದರಂತೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಬೆಂಗಳೂರಿನಲ್ಲಿ ಇಲ್ಲದ ಕಾರಣ, ರಾಜಭವನದ ಲೋಕಭವನಕ್ಕೆ ತೆರಳಿ ಅವರ ಪ್ರಧಾನ ಕಾರ್ಯದರ್ಶಿಗೆ ಪತ್ರ ಹಸ್ತಾಂತರಿಸಿದ್ದೇನೆ. ಸಂವಿಧಾನದ ಪ್ರಕಾರ ರಾಜ್ಯಪಾಲರು ನನ್ನ ರಾಜೀನಾಮೆಯನ್ನು ಅಂಗೀಕರಿಸುವ ವಿಶ್ವಾಸವಿದೆ,” ಎಂದು ಸ್ಪಷ್ಟಪಡಿಸಿದರು.
ಆಕಸ್ಮಿಕ ರಾಜಕಾರಣಿ, ಸಿದ್ಧಾಂತದಲ್ಲಿ ನೋ ಕಾಂಪ್ರಮೈಸ್!:
ತಮ್ಮ ಹಳ್ಳಿಯ ಹಿನ್ನೆಲೆಯನ್ನು ನೆನಪಿಸಿಕೊಂಡ ಅವರು, “ನಮ್ಮ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿ ಇರಲಿಲ್ಲ. ನಾನು ಶಾಸಕ, ಸಿಎಂ ಆಗುತ್ತೇನೆ ಎಂದು ಎಂದಿಗೂ ಅಂದುಕೊಂಡವನಲ್ಲ, ನನ್ನ ರಾಜಕೀಯ ಪ್ರವೇಶ ಕೇವಲ ಆಕಸ್ಮಿಕ. 1983ರಲ್ಲಿ ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದೆ. ಅಂದಿನಿಂದ ಇಂದಿನವರೆಗೆ ನಾನು ಎಂದೂ ನನ್ನ ಮೌಲ್ಯ ಮತ್ತು ಸಿದ್ಧಾಂತದಲ್ಲಿ ರಾಜಿಯಾಗಲಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ತತ್ವ ಆದರ್ಶಗಳೇ ನನಗೆ ದಾರಿ ದೀಪ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ನ, ವಸತಿ, ಶಿಕ್ಷಣ ಸಿಗಬೇಕೆಂಬ ನಂಬಿಕೆಯಿಂದಲೇ ನಾನು ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆ,” ಎಂದರು.
ಮತದಾರರೇ ನನ್ನ ಅಭಿಮಾನಿ ದೇವರುಗಳು:
“ನಟ ಡಾ.ರಾಜ್‌ಕುಮಾರ್ ಅವರು ತಮ್ಮ ಅಭಿಮಾನಿಗಳನ್ನು ದೇವರು ಎನ್ನುತ್ತಿದ್ದರು. ನಾನು ರಾಜಕಾರಣಿ, ನನಗೆ ಸಂವಿಧಾನವೇ ಧರ್ಮ ಮತ್ತು ನನ್ನ ಮತದಾರರೇ ನನ್ನ ಅಭಿಮಾನಿ ದೇವರುಗಳು,” ಎಂದು ಸಿದ್ದರಾಮಯ್ಯ ನುಡಿದರು. ಇದೇ ವೇಳೆ ಕರ್ನಾಟಕದ 7 ಕೋಟಿ ಜನರ ಸೇವೆ ಮಾಡಲು ತಮಗೆ ಎರಡು ಬಾರಿ ಸಿಎಂ ಹಾಗೂ ಎರಡು ಬಾರಿ ವಿರೋಧ ಪಕ್ಷದ ನಾಯಕನಾಗುವ ಮಹಾನ್ ಅವಕಾಶ ಮಾಡಿಕೊಟ್ಟ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಅರ್ಪಿಸಿದರು. ಜೊತೆಗೆ 2006ರಲ್ಲಿ ತಾವು ಕಾಂಗ್ರೆಸ್ ಸೇರಿದ ದಿನದಿಂದ ಪ್ರೀತಿ ತೋರಿದ ಪಕ್ಷದ ಕಾರ್ಯಕರ್ತರು, ಶಾಸಕರು, ಸಂಸದರು ಮತ್ತು ತಮಗೆ ಸಹಕರಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸ್ಮರಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


