ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಹೊತ್ತ ದುಬಾರೆಯ ‘ಪ್ರಶಾಂತ’

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಸಂಭ್ರಮವು ಕಳೆಗಟ್ಟಿದ್ದು, ಜಂಬೂಸವಾರಿಯಲ್ಲಿ ಈ ಬಾರಿ ಅಂಬಾರಿ ಹೊರುವ ಆನೆ ಯಾವುದು ಎಂಬ ಕುತೂಹಲಕ್ಕೆ ಅಧಿಕೃತವಾಗಿ ತೆರೆಬಿದ್ದಿದೆ. 54 ವರ್ಷದ ‘ಪ್ರಶಾಂತ’ ಆನೆಯು ಈ ಬಾರಿ 750 ಕೆ.ಜಿ. ಚಿನ್ನದ ಅಂಬಾರಿ ಹೊತ್ತು ಸಾಗಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ದುಬಾರೆ ಶಿಬಿರದ ವೀರ ಪ್ರಶಾಂತನು ಮೊದಲ ಬಾರಿಗೆ ಸಹಸ್ರಾರು ಜನರ ಮಧ್ಯೆ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದಾನೆ.

ಪ್ರಶಾಂತ ಆನೆಯು ಕೊಡಗು ಜಿಲ್ಲೆಯ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರಕ್ಕೆ ಸೇರಿದ್ದಾಗಿದೆ. ಈ ಆನೆಯನ್ನು 1993ರಲ್ಲಿ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಅತ್ಯಂತ ಬಲಿಷ್ಠವಾಗಿರುವ ಪ್ರಶಾಂತ ಆನೆಯು 2.61 ಮೀಟರ್ ಎತ್ತರ ಹಾಗೂ 3.46 ಮೀಟರ್ ಉದ್ದವನ್ನು ಹೊಂದಿದ್ದು, ಅಂದಾಜು 5100 ಕೆ.ಜಿ. ತೂಕವನ್ನು ಹೊಂದಿದ್ದಾನೆ.

ಇದನ್ನೂ ಓದಿ: ಮೈಸೂರು ದಸರಾ ವೈಭವ ಕಣ್ತುಂಬಿಕೊಳ್ಳಲು KSTDC ಯಿಂದ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್

ದುಬಾರೆಯ ಈ ಪ್ರಶಾಂತ ಆನೆಯು ಕಳೆದ 18 ವರ್ಷಗಳಿಂದಲೂ ನಿರಂತರವಾಗಿ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತ ಬಂದಿದ್ದಾನೆ. ಈ ಬಾರಿಯೂ ದಸರಾ ಗಜಪಡೆಯೊಂದಿಗೆ ಆಗಮಿಸಿದ್ದು, ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಸುವರ್ಣ ಅವಕಾಶ ಈತನಿಗೆ ಒಲಿದುಬಂದಿದೆ.  ಈ ಪ್ರಶಾಂತ ಆನೆಗೆ ಜೆ.ಎ. ಚಿ ಅವರು ಮಾವುತರಾಗಿದ್ದರೆ, ಚಂದ್ರ ಎಂಬುವವರು ಕಾವಾಡಿಗರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ