ಮೈಸೂರು ದಸರಾದಲ್ಲಿ ಬಲೂನ್ ಮಾರುತ್ತಿದ್ದ 9 ವರ್ಷದ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ : ಕಾರ್ತಿಕ್‌ಗೆ ಗಲ್ಲು ಶಿಕ್ಷೆ

ಮೈಸೂರು: ಕಳೆದ ವರ್ಷ ದಸರಾ ಮಹೋತ್ಸವದ ವೇಳೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ 9 ವರ್ಷದ ಬಾಲಕಿಯ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೈಸೂರಿನ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಕೃತ್ಯ ಎಸಗಿದ ಅಪರಾಧಿ ಕಾರ್ತಿಕ್ (32) ಎಂಬಾತನಿಗೆ ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಮೈಸೂರಿನ FTSC-1 ನ್ಯಾಯಾಲಯದ ನ್ಯಾಯಾಧೀಶರಾದ ಅನಿಲ್ ಪಿ. ವಘಾಢೆ ಅವರ ಪೀಠ ಆದೇಶ ಹೊರಡಿಸಿದೆ.

ನಡೆದಿದ್ದ ಘಟನೆಯ ಹಿನ್ನೆಲೆ ಏನು?:

ಕಳೆದ ವರ್ಷ ಮೈಸೂರು ದಸರಾ ಮಹೋತ್ಸವದ ಸಮಯದಲ್ಲಿ ವ್ಯಾಪಾರಕ್ಕಾಗಿ ಕಲಬುರಗಿಯಿಂದ ಬಂದಿದ್ದ ಕುಟುಂಬದ 9 ವರ್ಷದ ಪುಟ್ಟ ಬಾಲಕಿ, ದಸರಾ ವಸ್ತುಪ್ರದರ್ಶನದ ಆವರಣದ ಬಳಿ ಬಲೂನ್ ಮಾರಾಟ ಮಾಡುತ್ತಿದ್ದಳು.  ರಾತ್ರಿ ವೇಳೆ ಬಾಲಕಿ ತನ್ನ ಕುಟುಂಬದೊಂದಿಗೆ ಟೆಂಟ್‌ನಲ್ಲಿ ನಿದ್ರಿಸುತ್ತಿದ್ದಾಗ, ಕಾಮುಕ ಕಾರ್ತಿಕ್ ಬಾಲಕಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಕ್ರೂರವಾಗಿ ಅತ್ಯಾಚಾರ ಎಸಗಿ, ನಂತರ ಭೀಕರವಾಗಿ ಕೊಲೆ ಮಾಡಿ ಮೃತದೇಹವನ್ನು ಬಿಟ್ಟು ಪರಾರಿಯಾಗಿದ್ದನು. ಈ ಘಟನೆಯು ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದ ಗಂಭೀರತೆ ಅರಿತ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕೇವಲ 24 ಗಂಟೆಯೊಳಗೆ ಆರೋಪಿ ಕಾರ್ತಿಕ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ್ ಎಐ ಅಶ್ಲೀಲ ವಿಡಿಯೋ ಕೇಸ್: ಮೂವರು ಕಿಡಿಗೇಡಿಗಳನ್ನು ಬಂಧಿಸಿದ ಸೈಬರ್ ಕ್ರೈಂ ಪೊಲೀಸರು

ಕೋರ್ಟ್ ತೀರ್ಪು ಮತ್ತು ವಾದದ ಮುಖ್ಯಾಂಶಗಳು:

 ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮೈಸೂರಿನ ನ್ಯಾಯಾಲಯವು ಸುದೀರ್ಘ ವಿಚಾರಣೆ ನಡೆಸಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜಯಂತಿ ಅವರು ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಿ ಆರೋಪಿ ವಿರುದ್ಧದ ಅಪರಾಧ ಕೃತ್ಯವನ್ನು ಸಾಬೀತುಪಡಿಸಿದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಅನಿಲ್ ಪಿ. ವಘಾಢೆ ಅವರು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ತೀರ್ಪು ಬಡ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದು, ಇಂತಹ ಹೇಯ ಕೃತ್ಯ ಎಸಗುವವರಿಗೆ ತಕ್ಕ ಸಂದೇಶ ರವಾನಿಸಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ