ದೆಹಲಿ : ವಾರಕ್ಕೆ 5 ದಿನಗಳ ಕೆಲಸದ ಅವಧಿ (5-Day Banking Week) ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 28ರಿಂದ ಆರಂಭವಾಗಬೇಕಿದ್ದ ಮೂರು ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರವನ್ನು ವಾಪಸ್ (ಮುಂದೂಡಿಕೆ) ಪಡೆಯಲಾಗಿದೆ.
ಭಾರತೀಯ ಬ್ಯಾಂಕುಗಳ ಒಕ್ಕೂಟ (IBA) ಹಾಗೂ ಬ್ಯಾಂಕ್ ಸಂಘಟನೆಗಳ ಒಕ್ಕೂಟವಾದ ‘ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್’ (UFBU) ನಡುವೆ ಭಾನುವಾರ ತಡರಾತ್ರಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಮುಷ್ಕರ ಹಿಂಪಡೆಯಲು ನಿರ್ಧರಿಸಲಾಗಿದೆ. ಇದರಿಂದಾಗಿ ಸೋಮವಾರದಿಂದ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಯುಎಫ್ಬಿಯು ಉನ್ನತ ಸಂಧಾನಕಾರ ಮತ್ತು ಎಐಬಿಇಎ (AIBEA) ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ವೆಂಕಟಾಚಲಂ ನೀಡಿದ ಮಾಹಿತಿಯಂತೆ, ಸಂಧಾನ ಸಭೆಯಲ್ಲಿ 3 ಪ್ರಮುಖ ವಿಷಯಗಳ ಕುರಿತು ಸಹಮತ ಮೂಡಿದೆ. ವಾರಕ್ಕೆ 5 ದಿನಗಳ ಕೆಲಸದ ಬೇಡಿಕೆ ಪರಿಶೀಲಿಸಲು ಐಬಿಎ ಮತ್ತು ಯುಎಫ್ಬಿಯು ಪ್ರತಿನಿಧಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು (High-Level Committee) ರಚಿಸಲು ಐಬಿಎ ಒಪ್ಪಿಕೊಂಡಿದೆ. ಈ ಸಮಿತಿಯು ಎಲ್ಲಾ ಪಾಲುದಾರರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಿದೆ.
ಅಧಿಕಾರಿಗಳಿಗೆ ನೀಡಲಾಗುವ ತಾರತಮ್ಯದ ಪರ್ಫಾರ್ಮೆನ್ಸ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯನ್ನು ಪರಿಶೀಲಿಸಲು ಹಾಗೂ ಅಗತ್ಯ ಮಾರ್ಪಾಡು ಮಾಡಲು ಚರ್ಚಿಸಲಾಗುವುದು. ಬ್ಯಾಂಕ್ ಸಿಬ್ಬಂದಿಯ ಇತರ ಬಾಕಿ ಇರುವ ಬೇಡಿಕೆಗಳ ಕುರಿತು ಸಕಾರಾತ್ಮಕವಾಗಿ ಚರ್ಚಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಅಕ್ಟೋಬರ್ 1ರಿಂದ ಸಬ್ಸಿಡಿ LPGಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ; ಗ್ರಾಹಕರಿಗೆ ಮಹತ್ವದ ಸೂಚನೆ
ಮಾರ್ಚ್ 8, 2024 ರಂದು ಅಂತಿಮಗೊಂಡ 12ನೇ ದ್ವಿಪಕ್ಷೀಯ ಒಪ್ಪಂದದ ವೇಳೆ ಐಬಿಎ ಮತ್ತು ಬ್ಯಾಂಕ್ ಯೂನಿಯನ್ಗಳು ತತ್ವಶಃ 5 ದಿನಗಳ ಕೆಲಸದ ವಾರಕ್ಕೆ ಒಪ್ಪಿಗೆ ಸೂಚಿಸಿದ್ದವು. ಇದರ ಪ್ರಕಾರ ಎಲ್ಲಾ ಶನಿವಾರಗಳನ್ನು ರಜಾದಿನಗಳೆಂದು ಘೋಷಿಸಿ, ಸೋಮವಾರದಿಂದ ಶುಕ್ರವಾರದವರೆಗೆ ದಿನನಿತ್ಯದ ಕೆಲಸದ ಅವಧಿಯನ್ನು ಸುಮಾರು 40 ನಿಮಿಷ ಹೆಚ್ಚಿಸಲು ಪ್ರಸ್ತಾಪಿಸಲಾಗಿತ್ತು. ಆದರೆ ಈ ಪ್ರಸ್ತಾವನೆ ಕೇಂದ್ರ ಹಣಕಾಸು ಸಚಿವಾಲಯದ ಅನುಮೋದನೆಗೆ ಕಾಯುತ್ತಿತ್ತು. ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಯುಎಫ್ಬಿಯು ಸೆಪ್ಟೆಂಬರ್ 11 ರಂದು ದೇಶವ್ಯಾಪಿ ಒಂದು ದಿನದ ಮುಷ್ಕರ ನಡೆಸಿತ್ತು. ತದನಂತರ ಸೆಪ್ಟೆಂಬರ್ 28 ರಿಂದ 30 ರವರೆಗೆ 3 ದಿನಗಳ ಮುಷ್ಕರ ಹಾಗೂ ಅಕ್ಟೋಬರ್ 26 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ತಡರಾತ್ರಿ ನಡೆದ ಯಶಸ್ವಿ ಸಂಧಾನದ ಹಿನ್ನೆಲೆಯಲ್ಲಿ ಮುಷ್ಕರ ರದ್ದಾಗಿದ್ದು, ಎಟಿಎಂಗಳು, ಕರೆನ್ಸಿ ಚೆಸ್ಟ್ ಹಾಗೂ ಆನ್ಲೈನ್ ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಸೇವೆಗಳು ಅಡಚಣೆಯಿಲ್ಲದೆ ಲಭ್ಯವಾಗಲಿವೆ.

