ನ್ಯೂಯಾರ್ಕ್: ಕಳ್ಳತನ ಹಾಗೂ ಡ್ರಗ್ಸ್ ಹಪಾಹಪಿಯಿಂದ ಮೂರನೇ ಅಂತಸ್ತಿನ ಬಾಲ್ಕನಿಯಿಂದ ಜಿಗಿದು ಮನೆಗೆ ನುಗ್ಗಿ, ವ್ಯಕ್ತಿಯೊಬ್ಬರನ್ನು ಕತ್ತರಿಯಿಂದ 100 ಕ್ಕೂ ಹೆಚ್ಚು ಬಾರಿ ಇರಿದು ಅತ್ಯಂತ ಬರ್ಬರವಾಗಿ ಕೊಂದಿದ್ದ 39 ವರ್ಷದ ಯಾಂಗ್ ಜಾಂಗ್ (Yang Zhang) ಎಂಬಾತನಿಗೆ ನ್ಯೂಯಾರ್ಕ್‌ನ ಕ್ವೀನ್ಸ್ ನ್ಯಾಯಾಲಯವು 18 ವರ್ಷಗಳ ಜೀವಾವಧಿ ಜೈಲು ಶಿಕ್ಷೆ (18 Years to Life in Prison) ವಿಧಿಸಿ ತೀರ್ಪು ನೀಡಿದೆ. ಈ 2022 ರಲ್ಲಿ ನಡೆದಿದ್ದ ಈ ಘಟನೆಯ ಬಗ್ಗೆ ಹಂತಕ ಒಪ್ಪಿಕೊಂಡ ಬೆನ್ನಲ್ಲೇ ಜೂನ್ 3 ರಂದು ಈ ಕಠಿಣ ಶಿಕ್ಷೆ ಪ್ರಕಟವಾಗಿದೆ.
ವರದಿಗಳ ಪ್ರಕಾರ, ಮೇ 22, 2022 ರಂದು ಆರೋಪಿ ಯಾಂಗ್ ಜಾಂಗ್, ಕ್ವೀನ್ಸ್‌ನಲ್ಲಿ ವಾಸವಿದ್ದ 41 ವರ್ಷದ ಯಾತ್ ಮಿಂಗ್ ವಾಂಗ್ ಎಂಬುವವರ ಮನೆಗೆ ಕನ್ನ ಹಾಕಿದ್ದನು. ಮೂರನೇ ಅಂತಸ್ತಿನಲ್ಲಿದ್ದ ಅಪಾರ್ಟ್‌ಮೆಂಟ್ ತಲುಪಲು ಈತ ಒಂದು ಬಾಲ್ಕನಿಯಿಂದ ಮತ್ತೊಂದು ಬಾಲ್ಕನಿಗೆ ಕೋತಿಯಂತೆ ಜಿಗಿದು ಒಳನುಗ್ಗಿದ್ದನು ಎಂದು ಪೊಲೀಸರು ತನಿಖೆಯಲ್ಲಿ ಹೇಳಿದ್ದಾರೆ. ಮನೆಗೆ ನುಗ್ಗಿದ ತಕ್ಷಣ ಅಲ್ಲೇ ಇದ್ದ ಕತ್ತರಿಯನ್ನುಕೈಗೆತ್ತಿಕೊಂಡು ಮಾಲೀಕ ವಾಂಗ್ ಅವರ ಮೇಲೆ ಮುಗಿಬಿದ್ದಿದ್ದನು.
ಕ್ವೀನ್ಸ್ ಜಿಲ್ಲಾ ಅಟಾರ್ನಿ ಮೆಲಿಂಡಾ ಕಾಟ್ಜ್ ಅವರು ಈ ಘಟನೆಯನ್ನು “ಯಾವುದೇ ಪ್ರಚೋದನೆ ಇಲ್ಲದೆ ನಡೆದ ಅತ್ಯಂತ ಕ್ರೂರ ಹಾಗೂ ಅಮಾನವೀಯ ಹಿಂಸಾಚಾರ” ಎಂದು ಕರೆದಿದ್ದಾರೆ. ಹಂತಕ ಜಾಂಗ್, ವಾಂಗ್ ಅವರ ದೇಹದಾದ್ಯಂತ ಕತ್ತರಿಯಿಂದ 100 ಕ್ಕೂ ಹೆಚ್ಚು ಬಾರಿ ಇರಿದ್ದ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ವರದಿ ಹೇಳಿದೆ. ಗಂಡನ ಮೇಲಿನ ಈ ಭೀಕರ ದಾಳಿಯನ್ನು ಕಂಡು ಆಘಾತಕ್ಕೊಳಗಾದ ವಾಂಗ್ ಪತ್ನಿ ಹೇಗೋ ಪ್ರಾಣ ಉಳಿಸಿಕೊಂಡು ಮನೆಯಿಂದ ಹೊರಗೆ ಓಡಿಹೋಗಿ ಬದುಕುಳಿದಿದ್ದಾರೆ.
ಇದನ್ನೂ ಓದಿ:ಅಮೆರಿಕದಲ್ಲಿ ಭೀಕರ ದುರಂತ: ಮದ್ಯದ ಅಮಲಿನಲ್ಲಿ ಸಲೂನ್‌ಗೆ ಕಾರು ನುಗ್ಗಿಸಿ ನಾಲ್ವರನ್ನು ಕೊಂದ ಪಾಪಿ
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರ ಮೇಲೂ ಹಂತಕ ತಿರುಗಿಬಿದ್ದಿದ್ದರಿಂದ, ಆತನನ್ನು ನಿಯಂತ್ರಿಸಲು ಪೊಲೀಸರು ‘ಟೇಸರ್ ಗನ್’ ಬಳಸಿ ಪ್ರಜ್ಞೆ ತಪ್ಪಿಸಿ ವಶಕ್ಕೆ ಪಡೆದಿದ್ದರು. ತನಿಖೆಯ ವೇಳೆ ಹಂತಕ ಜಾಂಗ್ ತಾನು ಡ್ರಗ್ಸ್ (ಮಾದಕ ದ್ರವ್ಯ) ಹುಡುಕಿಕೊಂಡು ಆ ಮನೆಗೆ ನುಗ್ಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಮೃತ ವಾಂಗ್ ಹಾಗೂ ಹಂತಕನಿಗೆ ಯಾವುದೇ ಹಳೇ ಪರಿಚಯ ಇರಲಿಲ್ಲ. ಸಂಪೂರ್ಣವಾಗಿ ಮಾದಕ ವಸ್ತುವಿನ ಅಮಲಿನಲ್ಲಿ ಈ ಕೊಲೆ ನಡೆದಿರುವುದು ದೃಢಪಟ್ಟಿತ್ತು. ಮೇ 13 ರಂದು ಆರೋಪಿ ತನ್ನ ಮೇಲಿನ ‘ಸೆಕೆಂಡ್ ಡಿಗ್ರಿ ಮರ್ಡರ್’ (ಕೊಲೆ) ಆರೋಪವನ್ನು ಒಪ್ಪಿಕೊಂಡಿದ್ದರಿಂದ ನ್ಯಾಯಾಲಯ ಈ ಕಠಿಣ ತೀರ್ಪು ನೀಡಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


