ನವದೆಹಲಿ: ಟೆಲ್ ಅವಿವ್-ಬೌಂಡ್ ವಿಮಾನ ಅಪಹರಣ ಯತ್ನವನ್ನು ಯಶಸ್ವಿಯಾಗಿ ವಿಫಲಗೊಳಿಸಿ ಸಾಹಸ ಮೆರೆದ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ (Smit Machchhar) ಅವರೊಂದಿಗೆ ಜಂಟಿಯಾಗಿ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಂಜಾಬ್ ದೀಪ ಬೆಳಗಲು (Light a torch) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಂಜಮಿನ್ ನೆತನ್ಯಾಹು ಅಧಿಕೃತ ಆಹ್ವಾನ ನೀಡಿದ್ದಾರೆ. ಈ ಕುರಿತು ‘ಎಕ್ಸ್’ (X) ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನೆತನ್ಯಾಹು, ಭಯೋತ್ಪಾದನೆ ವಿರುದ್ಧ ಭಾರತ ಹಾಗೂ ಇಸ್ರೇಲ್ ಜಗತ್ತಿಗೆ ಮಾದರಿಯಾಗಿ ಒಟ್ಟಾಗಿ ಹೋರಾಡುತ್ತಿವೆ ಎಂದು ಪ್ರಶಂಸಿಸಿದ್ದಾರೆ.
ಫ್ಲೈದುಬೈ ವಿಮಾನ ಅಪಹರಣ ಯತ್ನ ಮತ್ತು ಪೈಲಟ್ ಸಾಹಸದ ಹಿನ್ನೆಲೆ:
ದುಬೈನಿಂದ 174 ಪ್ರಯಾಣಿಕರೊಂದಿಗೆ ಟೆಲ್ ಅವಿವ್ಗೆ ಹೊರಟಿದ್ದ ಫ್ಲೈದುಬೈ (Flydubai) ವಿಮಾನ FZ1073 ರ ಕಾಕ್ಪಿಟ್ನಲ್ಲಿ, ಸಹ-ಪೈಲಟ್ ವಿಮಾನವನ್ನು ಅಪಹರಿಸಲು ಯತ್ನಿಸಿದ್ದನು. ಆ ಸಂದರ್ಭದಲ್ಲಿ ಕರ್ತವ್ಯ ನಿಷ್ಠೆ ಮೆರೆದ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ ಅವರು ಗಂಭೀರವಾಗಿ ಗಾಯಗೊಂಡರೂ ಲೆಕ್ಕಿಸದೆ, ಧೈರ್ಯದಿಂದ ಕಾಕ್ಪಿಟ್ ಬಾಗಿಲು ತೆರೆದರು. ತಕ್ಷಣವೇ ಪ್ರಯಾಣಿಕರು ಹಾಗೂ ಸಿಬ್ಬಂದಿ ಒಟ್ಟಾಗಿ ದಾಳಿಕೋರ ಸಹ-ಪೈಲಟ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.
ನಂತರ ಸೌದಿ ಅರೇಬಿಯಾದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ (Emergency landing) ಮಾಡಲಾಗಿದ್ದು, ವಿಮಾನದಲ್ಲಿದ್ದ ಎಲ್ಲಾ 174 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಪ್ರಸ್ತುತ ಪೈಲಟ್ ಸ್ಮಿತ್ ಮಚ್ಛರ್ ಅವರು ಯುಎಇಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಈಗಾಗಲೇ ಅವರಿಗೆ ‘ಪ್ರೆಸಿಡೆನ್ಷಿಯಲ್ ಅವಾರ್ಡ್ ಫಾರ್ ಸಿವಿಲಿಯನ್ ಹಿರೋಯಿಸಂ’ ಪ್ರಶಸ್ತಿ ಘೋಷಿಸಿದ್ದಾರೆ.
ಇದನ್ನೂ ಓದಿ: ದುಬೈಗಿಂತ ಭಾರತದ ಕೆಲವು ನಗರಗಳಲ್ಲಿ ಅಗ್ಗವಾಯ್ತು ಪೆಟ್ರೋಲ್-ಡೀಸೆಲ್
ಮೋದಿ-ನೆತನ್ಯಾಹು ದೂರವಾಣಿ ಸಂಭಾಷಣೆ & ದ್ವಿಪಕ್ಷೀಯ ಬಾಂಧವ್ಯ:
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಪೈಲಟ್ಗೆ ಆಹ್ವಾನ ನೀಡಿದ ವಿಚಾರವನ್ನು ತಿಳಿಸುವುದರ ಜೊತೆಗೆ ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಪ್ರಾದೇಶಿಕ ಶಾಂತಿ-ಸ್ಥಿರತೆ ಕುರಿತು ಗಂಭೀರ ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಹಿಂಸಾಚಾರವನ್ನು ಬದಿಗೊತ್ತಿ ಸಂಘರ್ಷ ಪೀಡಿತ ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ರಾಜತಾಂತ್ರಿಕ ಮಾತುಕತೆಯೇ ಏಕೈಕ ಮಾರ್ಗ ಎಂದು ಪುನರುಚ್ಚರಿಸಿದ್ದಾರೆ. ಭಾರತ ಮತ್ತು ಇಸ್ರೇಲ್ ನಡುವಿನ ‘ವಿಶೇಷ ಕಾರ್ಯತಂತ್ರದ ಪಾಲುದಾರಿಕೆ’ ಮತ್ತಷ್ಟು ಬಲಪಡಿಸಲು ಉಭಯ ನಾಯಕರು ಬದ್ಧತೆ ಪ್ರದರ್ಶಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

