Breaking News

ಗ್ರಾಹಕರಿಗೆ ಮೋಸ ಮಾಡುವ ಆನ್‌ಲೈನ್ ಆ್ಯಪ್‌ಗಳಿಗೆ ‘ಡಾರ್ಕ್ ಪ್ಯಾಟರ್ನ್’ ಬಿಸಿ: ಜೆಪ್ಟೋ, ಸ್ಪೈಸ್‌ಜೆಟ್ ಸೇರಿ 9 ಕಂಪನಿಗಳಿಗೆ ದಂಡ

ನವದೆಹಲಿ: ಡಿಜಿಟಲ್ ಹಾಗೂ ಆನ್‌ಲೈನ್ ವಾಣಿಜ್ಯ ವೇದಿಕೆಗಳಲ್ಲಿ ‘ಡಾರ್ಕ್ ಪ್ಯಾಟರ್ನ್’ (Dark Patterns) ಪ್ರದರ್ಶಿಸಿ ಗ್ರಾಹಕರಿಗೆ ವಂಚಿಸುತ್ತಿದ್ದ ಬೃಹತ್ ಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸಮರ ಸಾರಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಅವರ ನಿರ್ದೇಶನದಂತೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಒಟ್ಟು 9 ಡಿಜಿಟಲ್ ಸಂಸ್ಥೆಗಳಿಗೆ ಭಾರಿ ದಂಡ ವಿಧಿಸಿದೆ.

ಗ್ರಾಹಕರನ್ನು ದಿಕ್ಕುತಪ್ಪಿಸಿ, ಅವರ ಅರಿವಿಗೆ ಬಾರದಂತೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದ 9 ಪ್ರಮುಖ ಕಂಪನಿಗಳಿಗೆ ಒಟ್ಟು ₹20 ಲಕ್ಷ ದಂಡ ವಿಧಿಸಲಾಗಿದ್ದು, ಹಲವು ಜನಪ್ರಿಯ ಆ್ಯಪ್‌ಗಳಿಗೆ ತಮ್ಮ ವಂಚನೆಯ ಶೈಲಿಯನ್ನು ತಕ್ಷಣವೇ ತಿದ್ದುಪಡಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ದಂಡಕ್ಕೊಳಗಾದ ಪ್ರಮುಖ ಕಂಪನಿಗಳು ಮತ್ತು ಕಾರಣಗಳು:

ಜೆಪ್ಟೋ (Zepto) – ₹7 ಲಕ್ಷ ದಂಡ: ಆರಂಭದಲ್ಲಿ ಕಡಿಮೆ ದರ ತೋರಿಸಿ, ಬಳಿಕ ಪಾವತಿಯ ಕೊನೆಯ ಹಂತದಲ್ಲಿ ನಿರ್ವಹಣೆ ಶುಲ್ಕ ಹಾಗೂ ಸದಸ್ಯತ್ವ ಶುಲ್ಕವೆಂದು ಹೆಚ್ಚುವರಿ ಹಣವನ್ನು ಗ್ರಾಹಕರಿಂದ ಕದ್ದುಮುಚ್ಚಿ ವಸೂಲಿ ಮಾಡುತ್ತಿದ್ದ ಕಾರಣ ಭಾರಿ ದಂಡ ವಿಧಿಸಲಾಗಿದೆ.

ಫಿಸಿಕ್ಸ್ ವಾಲಾ (Physics Wallah) – ₹5 ಲಕ್ಷ ದಂಡ: ತನ್ನ ‘ಪಿಡಬ್ಲ್ಯು ಫೌಂಡೇಶನ್’ಗೆಂದು ಆಟೋಮ್ಯಾಟಿಕ್ ಆಗಿ ₹10 ದೇಣಿಗೆ ಸೇರಿಸುತ್ತಿದ್ದುದು ಮತ್ತು ಉಚಿತ ಕೋರ್ಸ್‌ಗಳನ್ನು ಪಡೆಯಲು ವೈಯಕ್ತಿಕ ಮಾಹಿತಿಯನ್ನು ಕಡ್ಡಾಯಗೊಳಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಅನುಜ್ ಜಿಂದಾಲ್ (Anuj Jindal) – ₹3 ಲಕ್ಷ ದಂಡ: ಗ್ರಾಹಕರನ್ನು ದಿಕ್ಕುತಪ್ಪಿಸುವ ತಂತ್ರ ಅನುಸರಿಸಿದ್ದಕ್ಕಾಗಿ ದಂಡ.

ಫಸ್ಟ್ ಕ್ರೈ (FirstCry) – ₹2 ಲಕ್ಷ ದಂಡ: ಗ್ರಾಹಕರ ಪಾವತಿ ಹಂತದಲ್ಲಿ ಅನಗತ್ಯ ತಂತ್ರ ಬಳಕೆಗೆ ದಂಡ.

ಸ್ಪೈಸ್ ಜೆಟ್ (SpiceJet) – ₹1 ಲಕ್ಷ ದಂಡ: ಗ್ರಾಹಕರ ಅನುಮತಿಯಿಲ್ಲದೆ ಆಟೋಮ್ಯಾಟಿಕ್ ಲಾಯಲ್ಟಿ ಪ್ರೋಗ್ರಾಮ್ ನೋಂದಣಿ ಹಾಗೂ ಪ್ರಚಾರ ಸಂದೇಶಗಳಿಗೆ ಬಲವಂತದ ಸಮ್ಮತಿ ಪಡೆಯುತ್ತಿದ್ದ ಕಾರಣ.

ಫಾರ್ಮ್‌ಈಸಿ (PharmEasy) – ₹1 ಲಕ್ಷ ದಂಡ: ಗ್ರಾಹಕರನ್ನು ಮೋಸಗೊಳಿಸುವ ಇಂಟರ್‌ಫೇಸ್ ಬಳಕೆಗಾಗಿ.

ಮೆಕಾಫಿ (McAfee) – ₹1 ಲಕ್ಷ ದಂಡ: ಗ್ರಾಹಕರಿಗೆ ತಪ್ಪುದಾರಿ ಎಳೆಯುವ ಚಂದಾದಾರಿಕೆ ಪ್ರಕ್ರಿಯೆಗಾಗಿ ದಂಡ.

ಇದನ್ನೂ ಓದಿ: 2,000 ರೂಪಾಯಿಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ಶುಲ್ಕ ಅನ್ವಯ?: ಸಂಸತ್ತಿನಲ್ಲಿ ಕಾಯ್ದೆಗೆ ತಿದ್ದುಪಡಿ ಮಸೂದೆ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

‘ಡಾರ್ಕ್ ಪ್ಯಾಟರ್ನ್’ ಬದಲಾಯಿಸಲು ಸೂಚನೆ ಪಡೆದ ಕಂಪನಿಗಳು:

ಇಂಡಿಗೋ (IndiGo): ಟಿಕೆಟ್ ಬುಕ್ ಮಾಡುವಾಗ ವಿಮೆ (Insurance) ಆಯ್ಕೆ ಮಾಡದಿದ್ದರೆ, ಗ್ರಾಹಕರಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿದ್ದ “ನೋ, ಐ ವಿಲ್ ಟೇಕ್ ರಿಸ್ಕ್” (No, I will take risk) ಎಂಬ ಸಂದೇಶವನ್ನು ತಕ್ಷಣವೇ ಬದಲಾಯಿಸುವಂತೆ ಸೂಚಿಸಲಾಗಿದೆ.

ಬುಕ್ ಮೈ ಶೋ (BookMyShow): ಸಿನಿಮಾ ಹಾಗೂ ಇವೆಂಟ್ ಟಿಕೆಟ್ ಬುಕ್ ಮಾಡುವಾಗ ಪಾವತಿ ಹಂತದಲ್ಲಿ ‘ಬುಕ್ ಎ ಸ್ಮೈಲ್’ (Book A Smile) ನಿಧಿಗೆ ಸ್ವಯಂಚಾಲಿತವಾಗಿ ₹1 ದೇಣಿಗೆ ಸೇರ್ಪಡೆಯಾಗುತ್ತಿದ್ದ ವ್ಯವಸ್ಥೆಯನ್ನು ತಕ್ಷಣವೇ ತೆಗೆದುಹಾಕಲು ನಿರ್ದೇಶಿಸಲಾಗಿದೆ.

ಏನಿದು ಡಾರ್ಕ್ ಪ್ಯಾಟರ್ನ್?:

ಆನ್‌ಲೈನ್ ಆ್ಯಪ್ ಅಥವಾ ವೆಬ್‌ಸೈಟ್‌ಗಳಲ್ಲಿ ಗ್ರಾಹಕರು ತಮಗೆ ಅರಿವಿಲ್ಲದಂತೆಯೇ ಹೆಚ್ಚುವರಿ ಹಣ ಪಾವತಿಸುವಂತೆ, ವಿಮೆ ಅಥವಾ ಸದಸ್ಯತ್ವಗಳನ್ನು ಖರೀದಿಸುವಂತೆ ತಂತ್ರಜ್ಞಾನದ ಮೂಲಕ ಮಾನಸಿಕವಾಗಿ ದಾರಿ ತಪ್ಪಿಸುವುದನ್ನು ‘ಡಾರ್ಕ್ ಪ್ಯಾಟರ್ನ್’ ಎನ್ನಲಾಗುತ್ತದೆ. ಕೇಂದ್ರ ಸರ್ಕಾರವು 2023ರಲ್ಲೇ 13 ಮಾದರಿಯ ಡಾರ್ಕ್ ಪ್ಯಾಟರ್ನ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *