ನವದೆಹಲಿ: ಆಮ್ ಆದ್ಮಿ ಪಕ್ಷ (AAP) ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಸಂಸದ ರಾಘವ್ ಚಡ್ಡಾ ಅವರನ್ನು ಅಚ್ಚರಿಯ ಕ್ರಮವಾಗಿ ತೆಗೆದುಹಾಕಿದ್ದು, ಅವರ ಬದಲು ಅಶೋಕ್ ಮಿಟ್ಟಲ್ ಅವರನ್ನು ನೇಮಕ ಮಾಡಲಾಗಿದೆ. ಈ ನಿರ್ಧಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಬೆಳವಣಿಗೆಗೆ ಪ್ರತಿಕ್ರಿಯೆ ನೀಡಿದ ರಾಘವ್ ಚಡ್ಡಾ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು “ನನ್ನನ್ನು ಮೌನಗೊಳಿಸಲಾಗಿದೆ, ಆದರೆ ಸೋಲಲಿಲ್ಲ” ಎಂದು ಹೇಳಿದ್ದಾರೆ.

ಪ್ರಿಯಾಂಕಾ ಚೋಪ್ರಾ ಬೆಂಬಲ
ರಾಘವ್ ಹಂಚಿಕೊಂಡ ವಿಡಿಯೋಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೃದಯ ಮತ್ತು ಚಪ್ಪಾಳೆ ಎಮೋಜಿಗಳ ಮೂಲಕ ಅವರು ತನ್ನ ಬೆಂಬಲ ಸೂಚಿಸಿದ್ದಾರೆ. ರಾಘವ್, ನಟಿ ಪರಿಣಿತಿ ಚೋಪ್ರಾ ಅವರ ಪತಿ ಆಗಿದ್ದು, ಪ್ರಿಯಾಂಕಾ ಅವರ ಸಂಬಂಧಿಯಾಗಿದ್ದಾರೆ.
ಇದನ್ನೂ ಓದಿ: ನಾನು ಮುಖ್ಯಮಂತ್ರಿಯಾದರೆ ಮಹಿಳೆಯರಿಗೆ 3,000 ರೂ., ಪುರುಷರಿಗೆ 2,000 ರೂ. ನೀಡುತ್ತೇನೆ: ಯತ್ನಾಳ್

ಸಂಸತ್ತಿನ ವಿಚಾರಗಳ ಹೈಲೈಟ್
ರಾಘವ್ ತನ್ನ ಪೋಸ್ಟ್‌ನಲ್ಲಿ ಸಂಸತ್ತಿನಲ್ಲಿ ತಾನು ಎತ್ತಿದ ಹಲವು ಪ್ರಮುಖ ಸಾರ್ವಜನಿಕ ಸಮಸ್ಯೆಗಳ ವಿಡಿಯೋ ಹಂಚಿಕೊಂಡಿದ್ದಾರೆ. ಶಿಕ್ಷಣ-ಉದ್ಯೋಗ ಅಂತರ, “ಒನ್ ನೇಶನ್-ಒನ್ ಮೆಡಿಕಲ್ ಟ್ರೀಟ್ಮೆಂಟ್”, ವೇತನ ಸೂಚ್ಯಂಕ, ಭಗತ್ ಸಿಂಗ್ ಅವರಿಗೆ ಭಾರತ ರತ್ನ ಬೇಡಿಕೆ ಸೇರಿದಂತೆ ಹಲವು ವಿಷಯಗಳನ್ನು ಅವರು ಒತ್ತಿಹೇಳಿದ್ದಾರೆ.
ಪಕ್ಷದ ಒಳಗಿನ ಅಸಮಾಧಾನ?
ಇತ್ತೀಚಿನ ತಿಂಗಳುಗಳಲ್ಲಿ ರಾಘವ್ ಪಕ್ಷದ ಪ್ರಮುಖ ವಿಚಾರಗಳಲ್ಲಿ ಕಾಣಿಸಿಕೊಳ್ಳದಿರುವುದು, ಪಕ್ಷದ ತಂತ್ರದೊಂದಿಗೆ ಹೊಂದಾಣಿಕೆ ಇಲ್ಲ ಎಂಬ ಪ್ರಶ್ನೆಗಳನ್ನು ಹುಟ್ಟಿಸಿತು. ರಾಘವ್ ಅವರು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸದೆ ಸಾರ್ವಜನಿಕ ಸಮಸ್ಯೆಗಳ ಸರಿಪಡಿಸುವ ಕುರಿತು ಹೆಚ್ಚು ಮಾತನಾಡುತ್ತಿದ್ದಾರೆ ಎಂಬುದು ಪಕ್ಷದ ನಾಯಕರ ಅಸಮಾಧಾನವಾಗಿದೆ.

ಪಕ್ಷದೊಳಗಿನ ಪುನರ್‌ರಚನೆಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು AAP ತಿಳಿಸಿದೆ. ಆದರೆ ಬಿಜೆಪಿ, ರಾಘವ್ ಚಡ್ಡಾ ಪಕ್ಷದ ನಾಯಕತ್ವದಿಂದ ದೂರವಾಗುತ್ತಿರುವುದೇ ಕಾರಣ ಎಂದು ಆರೋಪಿಸಿದೆ.
ಇದರ ನಡುವೆ ದಿಶಾ ಪಟಾನಿ ಅವರ ಸಹೋದರಿ ಖುಷ್ಬೂ ಪಟಾನಿ ಕೂಡ ರಾಘವ್‌ಗೆ ಬೆಂಬಲ ಸೂಚಿಸಿ, ಭವಿಷ್ಯದಲ್ಲಿ ಅವರು ಸ್ವಂತ ಪಕ್ಷ ಸ್ಥಾಪಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

