ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ‘ಹೈ ಪ್ರೋಟೀನ್’ (ಹೆಚ್ಚಿನ ಪ್ರೋಟೀನ್) ಆಹಾರಗಳದ್ದೇ ದೊಡ್ಡ ಟ್ರೆಂಡ್ ಇತ್ತು. ಆದರೆ ಈಗ ಆ ಟ್ರೆಂಡ್ ಕೊಂಚ ಬದಲಾಗಿದ್ದು, ಆಹಾರದಲ್ಲಿ ನಾರಿನಂಶ ಅಥವಾ ‘ಫೈಬರ್’ ಒಳಗೊಳ್ಳುವಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹಣ್ಣುಗಳು, ತರಕಾರಿಗಳು, ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳ ಮಹತ್ವವನ್ನು ಈ ಹೊಸ ಟ್ರೆಂಡ್ ಎತ್ತಿಹಿಡಿಯುತ್ತಿದೆ. ಇದರಿಂದಾಗಿ “ಪ್ರೋಟೀನ್ ಮತ್ತು ಫೈಬರ್ ಇವೆರಡರಲ್ಲಿ ಯಾವುದಕ್ಕೆ ಮೊದಲ ಆದ್ಯತೆ ನೀಡಬೇಕು?” ಎಂಬ ಚರ್ಚೆ ಶುರುವಾಗಿದೆ. ಆದರೆ ತಜ್ಞರ ಪ್ರಕಾರ, ಇವೆರಡೂ ಒಂದಕ್ಕೊಂದು ಪೂರಕ ಪೋಷಕಾಂಶಗಳಾಗಿದ್ದು, ದೇಹದಲ್ಲಿ ವಿಭಿನ್ನ ಮತ್ತು ಅತ್ಯಗತ್ಯ ಕಾರ್ಯಗಳನ್ನು ನಿರ್ವಹಿಸುತ್ತವೆ.
ಫೈಬರ್ ಮತ್ತು ಪ್ರೋಟೀನ್ ಮಹತ್ವ ತಿಳಿಯಿರಿ:
ಜೀರ್ಣಕ್ರಿಯೆಯ ರಕ್ಷಕ ‘ಫೈಬರ್’:
ನಾರಿನಂಶ ಅಥವಾ ಫೈಬರ್ ನಮ್ಮ ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಅತ್ಯಂತ ಪ್ರಮುಖವಾಗಿದೆ. ಇದು ಮಲಬದ್ಧತೆಯನ್ನು ತಡೆದು, ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು (microbiome) ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ, ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ, ಹೊಟ್ಟೆ ತುಂಬಿದ ಅನುಭವ ನೀಡಿ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯ ಕಾಯಿಲೆಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಸ್ನಾಯುಗಳ ಶಕ್ತಿ ‘ಪ್ರೋಟೀನ್’:
ಮತ್ತೊಂದೆಡೆ, ಪ್ರೋಟೀನ್ ನಮ್ಮ ದೇಹದ ಸ್ನಾಯುಗಳ ದುರಸ್ತಿ, ಬೆಳವಣಿಗೆ ಮತ್ತು ಒಟ್ಟಾರೆ ದೈಹಿಕ ಕಾರ್ಯಗಳಿಗೆ ಅತ್ಯಗತ್ಯವಾಗಿದೆ. ದೇಹದಲ್ಲಿ ಹಾರ್ಮೋನ್‌ಗಳು ಮತ್ತು ಎಂಜೈಮ್‌ಗಳ ಉತ್ಪತ್ತಿಗೆ ಇದು ಪ್ರಮುಖ ಪಾತ್ರ ವಹಿಸುತ್ತದೆ. ಉಗುರು, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಇದು ಕಾಪಾಡುತ್ತದೆ. ವಿಶೇಷವಾಗಿ ನಿಯಮಿತವಾಗಿ ದೈಹಿಕ ಕಸರತ್ತು ಮಾಡುವವರಿಗೆ ಮತ್ತು ಸ್ನಾಯುಗಳ ಬೆಳವಣಿಗೆಯನ್ನು ಬಯಸುವವರಿಗೆ ಪ್ರೋಟೀನ್ ಅತ್ಯಗತ್ಯ.
ಯಾವುದನ್ನು ಆರಿಸಿಕೊಳ್ಳಬೇಕು?
ಸಂಕ್ಷಿಪ್ತವಾಗಿ ಹೇಳುವುದಾದರೆ, ಇವೆರಡರಲ್ಲಿ ಒಂದನ್ನು ಮಾತ್ರ ಆರಿಸಿಕೊಳ್ಳುವುದು ತಪ್ಪು. ಕೇವಲ ಪ್ರೋಟೀನ್‌ಗೆ ಮಾತ್ರ ಪ್ರಾಮುಖ್ಯತೆ ನೀಡಿದರೆ ಫೈಬರ್ ಕೊರತೆಯಾಗಿ ಜೀರ್ಣಕ್ರಿಯೆಯ ಸಮಸ್ಯೆಗಳು ಮತ್ತು ಮಲಬದ್ಧತೆ ಕಾಡಬಹುದು. ಅದೇ ರೀತಿ, ಪ್ರೋಟೀನ್ ಕಡೆಗಣಿಸಿ ಕೇವಲ ಫೈಬರ್ ಹೆಚ್ಚಾಗಿ ಸೇವಿಸಿದರೆ ಸ್ನಾಯುಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಆದ್ದರಿಂದ ದೇಹದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ.
ಇದನ್ನೂ ಓದಿ: ಗರ್ಭಿಣಿಯರೇ ಎಚ್ಚರ!: ದಿನವಿಡೀ ಕುಳಿತಲ್ಲೇ ಕುಳಿತರೆ ದುಪ್ಪಟ್ಟಾಗಲಿದೆ ಹೆರಿಗೆಯ ಅಪಾಯ; ಸಂಶೋಧನೆಯಲ್ಲಿ ಸ್ಪೋಟಕ ಮಾಹಿತಿ
ಪ್ರೋಟೀನ್ ಮತ್ತು ಫೈಬರ್ ಸಮತೋಲನಕ್ಕೆ 5 ಸುಲಭ ಸಲಹೆಗಳು:
ನೈಸರ್ಗಿಕ ಆಹಾರಗಳ ಆಯ್ಕೆ: ದ್ವಿದಳ ಧಾನ್ಯಗಳು, ಕಾಳುಗಳು, ಡೈರಿ ಉತ್ಪನ್ನಗಳು, ಮೀನು, ಮಾಂಸ ಮತ್ತು ಒಣಫಲಗಳ (Nuts) ಜೊತೆಗೆ ನಾರಿನಂಶವಿರುವ ಆಹಾರಗಳನ್ನು ದಿನನಿತ್ಯದ ಮೆನುವಿನಲ್ಲಿ ಸೇರಿಸಿ. ಇದರಿಂದ ಸ್ನಾಯು ಹಾಗೂ ಕರುಳು ಎರಡರ ಆರೋಗ್ಯವೂ ವೃದ್ಧಿಸುತ್ತದೆ.
ಊಟದ ತಟ್ಟೆಯಲ್ಲಿ ಜುಗಲ್‌ಬಂದಿ: ನೀವು ತಯಾರಿಸುವ ಪ್ರತಿ ಖಾದ್ಯದಲ್ಲೂ ಇವೆರಡೂ ಇರುವಂತೆ ನೋಡಿಕೊಳ್ಳಿ. ಉದಾಹರಣೆಗೆ, ಚಿಕನ್ ಜೊತೆಗೆ ರಾಗಿ ಅಥವಾ ಓಟ್ಸ್ ಮತ್ತು ತರಕಾರಿಗಳನ್ನು ಬಳಸಿ. ಅಥವಾ ತರಕಾರಿ ಸಾರಿಗೆ ಬೇಳೆಕಾಳುಗಳನ್ನು ಹೆಚ್ಚಾಗಿ ಬಳಸಿ.
ಸೇವನೆ ನಿಧಾನವಾಗಿ ಆರಂಭಿಸಿ: ನೀವು ಹೈ-ಫೈಬರ್ ಆಹಾರ ಸೇವನೆಗೆ ಹೊಸಬರಾಗಿದ್ದರೆ, ಒಮ್ಮೆಗೆ ಅತಿಯಾಗಿ ತಿನ್ನಬೇಡಿ. ಜೀರ್ಣಾಂಗಕ್ಕೆ ಕಿರಿಕಿರಿಯಾಗದಂತೆ ನಿಧಾನವಾಗಿ ಹಣ್ಣು, ತರಕಾರಿಗಳ ಪ್ರಮಾಣವನ್ನು ಹೆಚ್ಚಿಸುತ್ತಾ ಬನ್ನಿ.
ಹೆಚ್ಚು ನೀರು ಕುಡಿಯಿರಿ: ಆಹಾರದಲ್ಲಿ ನಾರಿನಂಶ ಹೆಚ್ಚಾದಂತೆ ದೇಹಕ್ಕೆ ನೀರಿನ ಅವಶ್ಯಕತೆಯೂ ಹೆಚ್ಚಿರುತ್ತದೆ. ಜೀರ್ಣಾಂಗ ವ್ಯವಸ್ಥೆಯು ಫೈಬರ್ ಅನ್ನು ಸರಾಗವಾಗಿ ಸಂಸ್ಕರಿಸಲು ಸಾಕಷ್ಟು ನೀರು ಕುಡಿಯುವುದು ಕಡ್ಡಾಯ.
ಆರೋಗ್ಯಕರ ಸ್ನ್ಯಾಕ್ಸ್: ಸಂಜೆಯ ತಿಂಡಿಗೆ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವ ಮೊಸರಿನೊಂದಿಗೆ ಬೆರ್ರಿ ಹಣ್ಣುಗಳು, ಒಂದು ಹಿಡಿ ಒಣಫಲಗಳು ಅಥವಾ ಕ್ಯಾರೆಟ್ ಜೊತೆಗೆ ಹಮ್ಮಸ್ (ಕಡಲೆ ಚಟ್ನಿ) ನಂತಹ ತಿಂಡಿಗಳನ್ನು ಆಯ್ದುಕೊಳ್ಳಿ.
ನಿಮ್ಮ ಸ್ನಾಯುಗಳ ಬಲ ಹಾಗೂ ಕರುಳಿನ ಆರೋಗ್ಯ ಎರಡನ್ನೂ ಒಟ್ಟಿಗೆ ಕಾಪಾಡಿಕೊಳ್ಳಲು ಇವೆರಡರ ಸಮತೋಲನ ಅತ್ಯಂತ ಅನಿವಾರ್ಯವಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


