ದೆಹಲಿ: ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ವಿದ್ಯಾರ್ಥಿಗಳ ಸರಣಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಪರೀಕ್ಷಾ ಅಕ್ರಮಗಳಿಗೆ ಶಾಶ್ವತ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಭಾರಿ ಕಠಿಣ ಕಾನೂನನ್ನು ಅಖಾಡಕ್ಕಿಳಿಸಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ‘ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026’ ಅನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಿದರು.
ಮಸೂದೆ ಕುರಿತು ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ಇದು ದೇಶದ ಲಕ್ಷಾಂತರ ಯುವಜನರ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ದಿನ. ಪರೀಕ್ಷಾ ಅಕ್ರಮ ತಡೆಯಲು ಸರ್ಕಾರ ತಂದಿರುವ ಈ ಕಠಿಣ ಕಾನೂನಿನ ಕುರಿತು ಎಲ್ಲ ಪಕ್ಷಗಳು ಸಭ್ಯತೆಯಿಂದ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು” ಎಂದು ವಿನಂತಿಸಿದರು.
ಸಂಘಟಿತ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಎಸಗುವ ಜಾಲಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ಕೋಟಿ ರೂಪಾಯಿವರೆಗೆ ಭಾರಿ ದಂಡ ವಿಧಿಸಲಾಗುತ್ತದೆ. ವೈಯಕ್ತಿಕವಾಗಿ ಅಕ್ರಮ ಎಸಗುವವರಿಗೆ 5 ರಿಂದ 10 ವರ್ಷ ಜೈಲು ಶಿಕ್ಷೆ ನಿಗದಿಪಡಿಸಲಾಗಿದೆ. ಪೇಪರ್ ಲೀಕ್ ಅಥವಾ ಅಕ್ರಮದಲ್ಲಿ ಯಾವುದೇ ಕೋಚಿಂಗ್ ಸೆಂಟರ್ ಅಥವಾ ಖಾಸಗಿ ತರಬೇತಿ ಸಂಸ್ಥೆಗಳು ಭಾಗಿಯಾಗಿರುವುದು ಸಾಬೀತಾದರೆ, ಅವುಗಳ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು (Property Attachment) ಹಾಕಿಕೊಳ್ಳಲಿದೆ.
ಇದನ್ನೂ ಓದಿ: ಕಾಂಪನ್ವೆಲ್ತ್‌ನಲ್ಲಿ ಮೀರಾಬಾಯಿ ಚಾನು ‘ಸ್ವರ್ಣ ಹ್ಯಾಟ್ರಿಕ್’: ಭಾರತಕ್ಕೆ ಒಲಿದ ಗ್ಲಾಸ್ಗೋ ಗೇಮ್ಸ್‌ನ ಮೊದಲ ಚಿನ್ನ
ಪರೀಕ್ಷೆ ನಡೆಸುವ ಏಜೆನ್ಸಿಗಳು/ಕಂಪನಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಅವುಗಳನ್ನು 8 ವರ್ಷಗಳ ಕಾಲ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಅಲ್ಲದೆ, ಕಂಪನಿಯ ಹಿರಿಯ ಆಡಳಿತ ಮಂಡಳಿ ಹಾಗೂ ನಿರ್ದೇಶಕರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಪ್ರಕರಣದ ತನಿಖೆಯನ್ನು ಕಡ್ಡಾಯವಾಗಿ 2 ತಿಂಗಳೊಳಗೆ ಪೂರ್ಣಗೊಳಿಸಬೇಕು. ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳ ಮೂಲಕ ದೈನಂದಿನ ವಿಚಾರಣೆ ನಡೆಸಿ, ಆರೋಪಪಟ್ಟಿ ಸಲ್ಲಿಕೆಯಾದ 3 ತಿಂಗಳೊಳಗೆ ಅಂತಿಮ ತೀರ್ಪು ನೀಡಬೇಕು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

