ಪುತ್ತೂರು: ಗ್ಯಾಸ್ ಇಲ್ಲದೆ ಜನ ಪರದಾಟ; ಸುಳ್ಳು ಹೇಳುವುದನ್ನು ನಿಲ್ಲಿಸಿ! ಮಾಜಿ ಶಾಸಕರಿಗೆ ಅಶೋಕ್ ಕುಮಾರ್ ರೈ ಟಾಂಗ್

ಪುತ್ತೂರು: ಕ್ಷೇತ್ರದಲ್ಲಿ ಉಂಟಾಗಿರುವ ಅಡುಗೆ ಅನಿಲದ ತೀವ್ರ ಕೊರತೆಯ ಕುರಿತು ಮಾಜಿ ಶಾಸಕ ಸಂಜೀವ ಮಠಂದೂರು ಅವರ ಹೇಳಿಕೆಗೆ ಹಾಲಿ ಶಾಸಕ ಅಶೋಕ್ ಕುಮಾರ್ ರೈ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಗ್ಯಾಸ್ ಕೊರತೆಯ ಆತಂಕ ಬೇಡ ಎಂದು ಮಾಜಿ ಶಾಸಕರು ಯಾವ ಆಧಾರದ ಮೇಲೆ ಹೇಳುತ್ತಿದ್ದಾರೋ ಗೊತ್ತಿಲ್ಲ, ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಲಿ” ಎಂದು ಅವರು ಕಿಡಿಕಾರಿದ್ದಾರೆ.

ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್ ರೈ, ಸದ್ಯದ ವಾಸ್ತವ ಸ್ಥಿತಿಯನ್ನು ತೆರೆದಿಟ್ಟರು. ಗ್ರಾಹಕರು ಒಂದು ಸಿಲಿಂಡರ್ ಪಡೆಯಲು 35 ರಿಂದ 40 ದಿನ ಕಾಯಬೇಕಾದ ಪರಿಸ್ಥಿತಿ ಇದೆ. ಸುಳ್ಯದಲ್ಲಿ ಸ್ವತಃ ಗ್ಯಾಸ್ ಏಜೆನ್ಸಿ ಹೊಂದಿರುವ ಶಾಸಕರು, ತಮಗೇ ಲೋಡ್ ಬಂದು 4 ದಿನಗಳಾಗಿವೆ ಎಂದು ತಿಳಿಸಿದ್ದಾರೆ.

ಅನಿಲ ಕೊರತೆಯಿಂದ ಹೋಟೆಲ್‌ಗಳು ಬಂದ್ ಆಗುತ್ತಿವೆ. ಆಟೋ ಚಾಲಕರು ಇಂಧನವಿಲ್ಲದೆ ಪರದಾಡುತ್ತಿದ್ದಾರೆ. ಉಪ್ಪಿನಂಗಡಿ ಕಂಬಳದ ಸಮಯದಲ್ಲೂ ಹೋಟೆಲ್ ನಡೆಸಲು ಗ್ಯಾಸ್ ಹೊಂದಿಸಿಕೊಡಬೇಕಾದ ಅನಿವಾರ್ಯತೆ ಇತ್ತು ಎಂದು ಅವರು ಸ್ಮರಿಸಿದರು. ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಇಂತಹ ಪರಿಸ್ಥಿತಿ ಬಂದಿದ್ದರೆ, ವಿರೋಧ ಪಕ್ಷದವರು ಸಿಲಿಂಡರ್ ಹೊತ್ತು ಬೀದಿಗಿಳಿಯುತ್ತಿದ್ದರು. ಆದರೆ ನಾವು ದೇಶದ ಹಿತದೃಷ್ಟಿಯಿಂದ ಅಗ್ಗದ ರಾಜಕೀಯ ಮಾಡುತ್ತಿಲ್ಲ ಎಂದು ತಿವಿದರು.

ಇದನ್ನೂ ಓದಿ: ಕಬಕ-ಪುತ್ತೂರು ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: 2.91 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಶೆಲ್ಟರ್ ನಿರ್ಮಾಣಕ್ಕೆ ಮಂಜೂರಾತಿ!

ಗ್ಯಾಸ್ ಕೊರತೆಗೆ ಯುದ್ಧದ ನೆಪ ಹೇಳುವುದನ್ನು ತಳ್ಳಿಹಾಕಿದ ಶಾಸಕರು, “ಯುದ್ಧ ನಡೆಯುವುದು ಬೇರೆ ದೇಶಗಳಲ್ಲಿ. ಎರಡೇ ದಿನಕ್ಕೆ ಇಲ್ಲಿ ಕೊರತೆಯಾದರೆ ಭಾರತದ ಪರಿಸ್ಥಿತಿ ಏನಾಗಬೇಡ? ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು. ಕೃಷಿಕರಿಗೆ ಗೊಬ್ಬರದ ಸಮಸ್ಯೆಯೂ ಎದುರಾಗಿದ್ದು, ಕೇಂದ್ರದ ವೈಫಲ್ಯ ಎದ್ದುಕಾಣುತ್ತಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು