ಬೆಂಗಳೂರು: ನಟಿ ರುಕ್ಮಿಣಿ ವಸಂತ್ ಅವರ ಅಶ್ಲೀಲ ಡೀಪ್‌ಫೇಕ್ ಚಿತ್ರಗಳು ಮತ್ತು ವಿಡಿಯೊಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಆರೋಪದ ಮೇಲೆ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಶಾಕಿಂಗ್ ಸಂಗತಿ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆಯ ಚಿಲಕಮುಖಿ ಗ್ರಾಮದ 24 ವರ್ಷದ ರವಿಕುಮಾರ್, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ 33 ವರ್ಷದ ಚಂದ್ರಕಾಂತ್ ಹಾಗೂ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ 25 ವರ್ಷದ ರಂಜಿತ್ ಕುಮಾರ್ ಎಂಬ ಆರೋಪಿಗಳ ವಿಚಾರಣೆ ಮುಂದುವರಿದಿದೆ.

AI ದುರ್ಬಳಕೆ ಮಾಡಿ ಡೀಪ್‌ಫೇಕ್ ಸೃಷ್ಟಿ
ಪೊಲೀಸರ ಪ್ರಕಾರ, ಆರೋಪಿಗಳು AI ಆಧಾರಿತ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ಗಳ ಸಹಾಯದಿಂದ ನಟಿಯರ ಫೋಟೋ ಹಾಗೂ ವಿಡಿಯೋಗಳನ್ನು ಅಶ್ಲೀಲ ದೃಶ್ಯಗಳಿಗೆ ಜೋಡಿಸಿ ಡೀಪ್‌ಫೇಕ್ ವಿಷಯಗಳನ್ನು ಸೃಷ್ಟಿಸುತ್ತಿದ್ದರು. ಬಳಿಕ ಈ ನಕಲಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡಲಾಗುತ್ತಿತ್ತತು.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಜಾಲದ ವ್ಯಾಪ್ತಿ, ಇನ್ನಿತರ ಭಾಗಿಯಾಗಿರುವವರ ಕುರಿತು ತನಿಖೆ ಮುಂದುವರಿದಿದೆ.
ವಿಚಾರಣೆಯಲ್ಲಿ ಬಯಲಾದ ಮಾಹಿತಿ
ಮೂಲಗಳ ಪ್ರಕಾರ, ರಂಜಿತ್ ಕುಮಾರ್ ಸಾಫ್ಟ್‌ವೇರ್ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ಸುಮಾರು ₹20 ಲಕ್ಷ ವೇತನ ಪಡೆಯುತ್ತಿದ್ದ. ವಿಚಾರಣೆ ವೇಳೆ ಆತ ನಟಿಯರ ಡೀಪ್‌ಫೇಕ್ ವಿಡಿಯೋಗಳನ್ನು ಮನರಂಜನೆಗಾಗಿ ಸೃಷ್ಟಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಇನ್ನೊಬ್ಬ ಆರೋಪಿ ರವಿಕುಮಾರ್ ನರ್ಸಿಂಗ್‌ನಲ್ಲಿ ಬಿಎಸ್ಸಿ ಪದವಿ ಪಡೆದಿದ್ದು, ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದನು. ಯೂಟ್ಯೂಬ್‌ನಿಂದ ಮೊದಲ ಆದಾಯ ಬಂದ ಬಳಿಕ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಚಾನೆಲ್ ಜನಪ್ರಿಯಗೊಳಿಸಲು ನಟಿಯರ ಡೀಪ್‌ಫೇಕ್ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಚಂದ್ರಕಾಂತ್ ಬೆಂಗಳೂರಿನಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದು, ಉತ್ತಮ ಆದಾಯ ಹೊಂದಿದ್ದರೂ ಅಶ್ಲೀಲ ಡೀಪ್‌ಫೇಕ್ ವಿಷಯಗಳನ್ನು ಸೃಷ್ಟಿಸುವ ಚಟುವಟಿಕೆಯಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ತನಿಖೆ ಮುಂದುವರಿಕೆ
ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್‌ಗಳು ಹಾಗೂ ಇತರೆ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಈ ಪ್ರಕರಣದ ವ್ಯಾಪ್ತಿ, ಇನ್ನಷ್ಟು ಸಂತ್ರಸ್ತರಿರುವ ಸಾಧ್ಯತೆ ಹಾಗೂ ವಿಷಯ ಸೃಷ್ಟಿ ಮತ್ತು ಪ್ರಸಾರದಲ್ಲಿ ಇತರರ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

