ನಾವು ಪ್ರತಿದಿನ ದೇವಸ್ಥಾನಗಳಿಗೆ ಭೇಟಿ ನೀಡುತ್ತೇವೆ ಅಥವಾ ಮನೆಯಲ್ಲಿ ದೇವರೆದುರು ಕೈಮುಗಿದು ಪ್ರಾರ್ಥಿಸುತ್ತೇವೆ. ಆದರೆ ನಮಸ್ಕಾರ ಮಾಡುವಾಗ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ನಮ್ಮ ಭಕ್ತಿಯ ಫಲವನ್ನು ಕಡಿಮೆ ಮಾಡಬಹುದು ಎಂಬುದು ನಿಮಗೆ ಗೊತ್ತೇ? ಹಿಂದೂ ಧರ್ಮಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವರಿಗೆ ಶಿರಬಾಗುವಾಗ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಕೈಗಳನ್ನು ಜೋಡಿಸುವ ಸರಿಯಾದ ಶೈಲಿ:
ದೇವರೆದುರು ಕೈ ಮುಗಿಯುವಾಗ ಎರಡೂ ಹಸ್ತಗಳ ಬೆರಳುಗಳ ನಡುವೆ ಯಾವುದೇ ಅಂತರ ಇರಬಾರದು. ಬೆರಳುಗಳು ಸಡಿಲವಾಗಿರಬೇಕೇ ಹೊರತು ತೀರಾ ಬಿಗಿಯಾಗಿರಬಾರದು. ನಮಸ್ಕರಿಸುವಾಗ ಹೆಬ್ಬೆರಳುಗಳನ್ನು ನಮ್ಮ ಹುಬ್ಬುಗಳ ಮಧ್ಯಭಾಗಕ್ಕೆ (ಆಜ್ಞಾ ಚಕ್ರ ಅಥವಾ ಬೊಟ್ಟು ಇಡುವ ಜಾಗ) ಸ್ಪರ್ಶಿಸಿ, ದೇವರ ಪಾದಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ನಮಸ್ಕಾರ ಮಾಡಿದ ತಕ್ಷಣ ಕೈಗಳನ್ನು ತಟ್ಟನೆ ಕೆಳಗೆ ಇಳಿಸಬಾರದು; ಕೈಗಳನ್ನು ಎದೆಯ ಮಧ್ಯಭಾಗದಲ್ಲಿ (ಅನಾಹತ ಚಕ್ರವಿರುವ ಸ್ಥಳ) ಮಣಿಕಟ್ಟುಗಳು ತಾಗುವಂತೆ ಒಂದು ಕ್ಷಣ ಇರಿಸಿಕೊಂಡು ನಂತರ ನಿಧಾನವಾಗಿ ಕೆಳಗೆ ತರಬೇಕು. ಇದು ದೇವರಿಂದ ಗ್ರಹಿಸಿದ ಸಾತ್ತ್ವಿಕ ಶಕ್ತಿಯನ್ನು ಶರೀರ ಪೂರ್ತಿ ಹರಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:ಬೆಳಗಿನ ಹೊತ್ತು ಮನೆಯಲ್ಲಿ ರಕ್ತ ಬೀಳಬಾರದು ಏಕೆ? ಇದರ ಹಿಂದಿರುವ ಆಧ್ಯಾತ್ಮಿಕ ರಹಸ್ಯ ಮತ್ತು ಶಾಸ್ತ್ರದ ಮಾತು ಇಲ್ಲಿದೆ.
ಪುರುಷರು ಮತ್ತು ಮಹಿಳೆಯರಿಗೆ ಬೇರೆ ಬೇರೆ ನಿಯಮಗಳು:
ಪುರುಷರಿಗೆ ಸಾಷ್ಟಾಂಗ ನಮಸ್ಕಾರ: ಪುರುಷರು ದೇವರೆದುರು ನೆಲದ ಮೇಲೆ ಮಲಗಿ ‘ಸಾಷ್ಟಾಂಗ’ ನಮಸ್ಕಾರವನ್ನು ಮಾಡಬೇಕು. ಇಲ್ಲಿ ದೇಹದ ಎಂಟು ಅಂಗಗಳು (ಕಾಲುಗಳು, ಮೊಣಕಾಲುಗಳು, ಎದೆ, ಕೈಗಳು, ಮುಖ/ಹಣೆ, ಮನಸ್ಸು, ಬುದ್ಧಿ ಮತ್ತು ನುಡಿ) ಸಂಪೂರ್ಣವಾಗಿ ದೇವರಿಗೆ ಶರಣಾಗುವುದನ್ನು ಇದು ಸೂಚಿಸುತ್ತದೆ.
ಮಹಿಳೆಯರಿಗೆ ಪಂಚಾಂಗ ನಮಸ್ಕಾರ: ಧರ್ಮಶಾಸ್ತ್ರದ ಪ್ರಕಾರ ಮಹಿಳೆಯರು ಎಂದಿಗೂ ಸಾಷ್ಟಾಂಗ ನಮಸ್ಕಾರ ಮಾಡಬಾರದು (ನೆಲದ ಮೇಲೆ ಸಂಪೂರ್ಣ ಮಲಗಬಾರದು). ಮಹಿಳೆಯರ ಗರ್ಭಾಶಯ ಮತ್ತು ಎದೆಯ ಭಾಗ ನೆಲಕ್ಕೆ ತಾಗಬಾರದು ಎಂಬ ನಿಯಮವಿದೆ. ಆದ್ದರಿಂದ ಮಹಿಳೆಯರು ಮೊಣಕಾಲೂರಿ, ಹಣೆ ಮತ್ತು ಕೈಗಳು ಮಾತ್ರ ನೆಲಕ್ಕೆ ತಾಗುವಂತೆ ‘ಪಂಚಾಂಗ’ ನಮಸ್ಕಾರವನ್ನು ಮಾತ್ರ ಮಾಡಬೇಕು.
ದೇವಸ್ಥಾನದಲ್ಲಿ ದೇವರ ವಿಗ್ರಹದ ಎದುರು ನೇರವಾಗಿ ನಿಂತು ನಮಸ್ಕರಿಸುವ ಬದಲು, ಕೊಂಚ ಪಕ್ಕಕ್ಕೆ ಸರಿದು ನಿಂತು ಪ್ರಾರ್ಥಿಸಬೇಕು. ಹಾಗೆಯೇ ಜಗಳ ಆಡುತ್ತಿರುವಾಗ, ಸ್ನಾನ ಮಾಡದೇ ಅಥವಾ ಕೇವಲ ಒಂದು ಕೈಯಿಂದ ದೇವರಿಗೆ ನಮಸ್ಕರಿಸುವುದು ನಿಷೇಧಿಸಲ್ಪಟ್ಟಿದೆ. ದೇವರೆದುರು ನಮ್ಮ ಅಹಂಕಾರವನ್ನು ಮರೆತು ಸಂಪೂರ್ಣವಾಗಿ ಶರಣಾಗುವುದೇ ನಿಜವಾದ ನಮಸ್ಕಾರದ ರಹಸ್ಯವಾಗಿದೆ.
ಆದ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


