ಕಲ್ಲಡ್ಕ : ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಸುಸಂದರ್ಭದಲ್ಲಿ, ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನದ ಕರೆ ಮೇರೆಗೆ ದೇಶದಾದ್ಯಂತ ಹಮ್ಮಿಕೊಳ್ಳಲಾದ ‘ನಮಾಮಿ ಭಾರತಮ್’ ವಂದೇ ಮಾತರಮ್ ಸಮೂಹ ಗಾಯನ ಕಾರ್ಯಕ್ರಮವು ಶುಕ್ರವಾರ (ಸೆ.25) ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ‘ಆಜಾದ್ ಭವನ’ದಲ್ಲಿ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಅಜಿತ್ ಮುಲಾರ್ ಹಾಗೂ ಶ್ರೀ ಅಜಿತ್ ಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮಹತ್ವ ಮತ್ತು ಉದ್ದೇಶವನ್ನು ವಿವರಿಸಿದ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಅವರು, “ವಂದೇ ಮಾತರಮ್ ಗೀತೆಯು ಯಾವುದೇ ಕೋಮುವಾದವನ್ನು ಕೆರಳಿಸುವ ಗೀತೆಯಲ್ಲ, ಬದಲಾಗಿ ಯುವಜನತೆಯಲ್ಲಿ ರಾಷ್ಟ್ರಭಕ್ತಿಯನ್ನು ಅರಳಿಸುವ ಪವಿತ್ರ ರಣಮಂತ್ರವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಸದಾ ಜಾಗೃತ ರಾಷ್ಟ್ರಭಾವನೆಯನ್ನು ಮೂಡಿಸುವ ಮಹೋನ್ನತ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿ: “ನೀವು ಯಾವಾಗಲೂ ನನ್ನನ್ನೇ ಟೀಕಿಸುತ್ತಿರುತ್ತೀರಿ”; ಕಲಾಪದ ನಡುವೆ ಸ್ವಪಕ್ಷದ ನಾಯಕನ ಬಳಿ ಹೋಗಿ ಆರ್ಭಟಿಸಿದ ಶಾಸಕಿ ರೂಪಕಲಾ
ಈ ವಿಶೇಷ ಸಮೂಹ ಗಾಯನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಉಪನ್ಯಾಸಕ ವೃಂದದವರು ಸೇರಿ ಒಟ್ಟು 252 ಮಂದಿ ಒಟ್ಟಾಗಿ ಅಖಂಡ ವಂದೇ ಮಾತರಮ್ ಗೀತೆಯನ್ನು ಅತ್ಯಂತ ಭಾವಪೂರ್ಣವಾಗಿ ಹಾಡುವ ಮೂಲಕ ರಾಷ್ಟ್ರಪ್ರೇಮ ಮೆರೆದರು. ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಕು. ನಾಗಲತಾ ಅವರು ನಿರೂಪಿಸಿ ನಿರ್ವಹಿಸಿದರು.

