ವಿರಾಜಪೇಟೆ, ಏಪ್ರಿಲ್ 06: ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರವಾದ ತಡಿಯಂಡಮೋಲ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಐಟಿ ಉದ್ಯೋಗಿ ಶರಣ್ಯ (36) ಅವರು ಮೂರು ದಿನಗಳ ಕಾಲ ದಟ್ಟಾರಣ್ಯದಲ್ಲಿ ಕಳೆದ ನಂತರ ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಅರಣ್ಯ ಇಲಾಖೆ, ಪೊಲೀಸ್, ಸ್ಥಳೀಯರು ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಡೆಸಿದ ಬೃಹತ್ ಶೋಧ ಕಾರ್ಯಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ.
ಕೊಚ್ಚಿ ಸಮೀಪದ ನಡನ್ನಪುರಂ ಮೂಲದ ಶರಣ್ಯ ಅವರು ಸುಮಾರು 15 ವರ್ಷಗಳ ಟ್ರೆಕ್ಕಿಂಗ್ ಅನುಭವ ಹೊಂದಿದ್ದಾರೆ. ಏಪ್ರಿಲ್ 2ರಂದು ಅವರು ಒಂಟಿಯಾಗಿ ತಡಿಯಂಡಮೋಲ್ ಬೆಟ್ಟ ಏರಿದ್ದರು. ಆದರೆ ವಾಪಸ್ ಬರುವಾಗ ದಾರಿ ತಪ್ಪಿ ದಟ್ಟ ಕಾಡಿನೊಳಗೆ ಸಿಲುಕಿಕೊಂಡಿದ್ದರು. “ದಾರಿ ತಪ್ಪಿದ ತಕ್ಷಣ ಅವರು ಹೋಂ ಸ್ಟೇ ಮಾಲೀಕರಿಗೆ ಕರೆ ಮಾಡಿದ್ದರು, ಆದರೆ ಕ್ಷಣಾರ್ಧದಲ್ಲಿ ಅವರ ಫೋನ್ ಸ್ವಿಚ್ ಆಫ್ ಆದ ಕಾರಣ ಅವರ ಸ್ಥಳವನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿ ಹೆಚ್ಚುವರಿ ತಂಡಗಳನ್ನು ನಿಯೋಜಿಸಿದ್ದರು. ಕಾಲ್ನಡಿಗೆಯಲ್ಲಿ ಹೋಗಲು ಅಸಾಧ್ಯವಾದ ಕಡೆಗಳಲ್ಲಿ ಡ್ರೋನ್, ಥರ್ಮಲ್ ಡ್ರೋನ್ ಮತ್ತು ಶ್ವಾನ ದಳದ ಸಹಾಯ ಪಡೆಯಲಾಯಿತು. ಭಾನುವಾರ ಬೆಳಿಗ್ಗೆ ದುರ್ಗಮ ಅರಣ್ಯ ಪ್ರದೇಶವೊಂದರಲ್ಲಿ ಶರಣ್ಯ ಅವರನ್ನು ಪತ್ತೆಹಚ್ಚಲಾಯಿತು. ಅವರ ಟ್ರೆಕ್ಕಿಂಗ್ ಅನುಭವವೇ ಅವರು ಇಷ್ಟು ದಿನ ಧೈರ್ಯವಾಗಿ ಬದುಕುಳಿಯಲು ಕಾರಣವಾಯಿತು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬೇಸಿಗೆಯ ಬಿಸಿಲಿಗೆ ತಂಪು ನೀಡುವ ‘ವೀಳ್ಯದೆಲೆ-ಗುಲ್ಕನ್ ಶರಬತ್’: ಮನೆಯಲ್ಲೇ ಸುಲಭವಾಗಿ ತಯಾರಿಸಿ!

ಕೇರಳದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶರಣ್ಯ ಅವರ ಕುಟುಂಬದವರು ರಕ್ಷಣೆಗಾಗಿ ಮನವಿ ಮಾಡಿದ್ದರು. ಈಗ ಮಗಳು ಸುರಕ್ಷಿತವಾಗಿ ಸಿಕ್ಕಿರುವುದು ಕುಟುಂಬಕ್ಕೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಅರಣ್ಯ ಇಲಾಖೆಯು ಪಶ್ಚಿಮ ಘಟ್ಟಗಳ ಇಂತಹ ಅಪಾಯಕಾರಿ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ಮಾಡುವಾಗ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪ್ರವಾಸಿಗರಿಗೆ ಸೂಚಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


