ಸುಳ್ಯ: ಸುಳ್ಯ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯಲ್ಲಿ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ವಿವಿಧ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲು 25 ಕೋಟಿ ರೂ. ಅನುದಾನ ಒದಗಿಸುವಂತೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮನವಿ ಮಾಡಿದರು.
ಕ್ಷೇತ್ರದ ಗ್ರಾಮೀಣ ಭಾಗಗಳ ರಸ್ತೆ ಸಂಪರ್ಕವನ್ನು ಬಲಪಡಿಸುವುದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು ಹಾಗೂ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಒಟ್ಟು 8 ಪ್ರಮುಖ ರಸ್ತೆ ಕಾಮಗಾರಿಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಸುಳ್ಯ ತಾಲೂಕಿನ ರಾಜ್ಯ ಹೆದ್ದಾರಿ 276ರ 13.80ರಿಂದ 14.80 ಕಿ.ಮೀ.ವರೆಗಿನ ಒಂದು ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು 3 ಕೋಟಿ ರೂ. ಹಾಗೂ ಕಡಬ ತಾಲೂಕಿನ ರಾಜ್ಯ ಹೆದ್ದಾರಿ 100ರ 14.70ರಿಂದ 14.90 ಕಿ.ಮೀ.ವರೆಗಿನ 0.20 ಕಿ.ಮೀ. ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ ಕೋರಲಾಗಿದೆ.
ಇನ್ನು ಜಿಲ್ಲಾ ಮುಖ್ಯ ರಸ್ತೆ ಕಾಮಗಾರಿಗಳ ಪೈಕಿ ಸುಳ್ಯ ತಾಲೂಕಿನ ಎಲಿಮಲೆ–ಅರಂತೋಡು ರಸ್ತೆಯ 6ರಿಂದ 10 ಕಿ.ಮೀ.ವರೆಗಿನ 4 ಕಿ.ಮೀ. ರಸ್ತೆ ಅಭಿವೃದ್ಧಿಗೆ 4.50 ಕೋಟಿ ರೂ. ಹಾಗೂ ಅಯ್ಯನಕಟ್ಟೆ ಭಾಗದ ರಸ್ತೆಯ 4ರಿಂದ 9 ಕಿ.ಮೀ.ವರೆಗಿನ 5 ಕಿ.ಮೀ. ರಸ್ತೆ ಅಭಿವೃದ್ಧಿಗೆ 4.50 ಕೋಟಿ ರೂ. ಅನುದಾನ ಕೋರಲಾಗಿದೆ.

ಅದೇ ರೀತಿ, ಸುಳ್ಯ ತಾಲೂಕಿನ ಜೈವ…–ಮಂಡೆಕೋಲು ರಸ್ತೆಯ 6.50ರಿಂದ 10 ಕಿ.ಮೀ.ವರೆಗಿನ 3.50 ಕಿ.ಮೀ. ರಸ್ತೆ ಮರುಡಾಂಬರೀಕರಣಕ್ಕೆ 2 ಕೋಟಿ ರೂ., ಕಡಬ ತಾಲೂಕಿನ ಸುಬ್ರಹ್ಮಣ್ಯ–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ 29.50ರಿಂದ 31.50 ಕಿ.ಮೀ.ವರೆಗಿನ ರಸ್ತೆ ಕಾಂಕ್ರೀಟೀಕರಣ ಹಾಗೂ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಪ್ರಸ್ತಾಪಿಸಲಾಗಿದೆ.

ಇದರೊಂದಿಗೆ ಕಡಬ ತಾಲೂಕಿನ ಪೆರ್ವಾಜೆ ಭಾಗದ ರಾಜ್ಯ ಹೆದ್ದಾರಿಯ 29ರಿಂದ 31 ಕಿ.ಮೀ.ವರೆಗಿನ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗೆ 2 ಕೋಟಿ ಹಾಗೂ ನೆಲ್ಯಾಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 75 ಮತ್ತು ರಾಜ್ಯ ಹೆದ್ದಾರಿ 113 ಸಂಪರ್ಕಿಸುವ ರಸ್ತೆಯ 8.45ರಿಂದ 10 ಕಿ.ಮೀ.ವರೆಗಿನ ರಸ್ತೆ ಅಗಲೀಕರಣಕ್ಕೆ 3 ಕೋಟಿ ರೂ. ಅನುದಾನ ಒದಗಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಎಂಟು ರಸ್ತೆ ಅಭಿವೃದ್ಧಿ ಕಾಮಗಾರಿಗೆ 25 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಸಚಿವರಲ್ಲಿ ಭಾಗೀರಥಿ ಮುರುಳ್ಯ ಮನವಿ ಮಾಡಿದ್ದಾರೆ.
ಕ್ಷೇತ್ರದ ಪ್ರಮುಖ ಹಾಗೂ ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಅಗತ್ಯ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

