ಸುಳ್ಯ: ಮನೆಯಲ್ಲಿ ಹಣಕಾಸಿನ ವಿಷಯವಾಗಿ ಪೋಷಕರು ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದ 16 ವರ್ಷದ ಪಿಯುಸಿ ವಿದ್ಯಾರ್ಥಿಯೊಬ್ಬ ಮನೆ ತೊರೆದು ನಾಪತ್ತೆಯಾಗಿರುವ (Missing Boy Case) ಕರುಣಾಜನಕ ಹಾಗೂ ಆತಂಕಕಾರಿ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ. ಸುಳ್ಯ ತಾಲೂಕಿನ ಸುಳ್ಯ ಗ್ರಾಮದ ರವಿಕುಮಾರ್ ಮುರುಳ್ಯ ಎಂಬುವವರ ಪುತ್ರ ಶ್ರೀವತ್ಸ (16) ನಾಪತ್ತೆಯಾದ ಬಾಲಕ. ಪುತ್ತೂರಿನ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ, ಕಳೆದ ಕೆಲ ದಿನಗಳಿಂದ ಮನೆಗೆ ಬಾರದೆ ಕುಟುಂಬಸ್ಥರನ್ನು ತೀವ್ರ ಆತಂಕಕ್ಕೆ ತಳ್ಳಿದ್ದಾನೆ.
ಮನೆಯಲ್ಲಿ ಹಣದ ವಿಚಾರವಾಗಿ ಪೋಷಕರು ಬೈದು ಬುದ್ಧಿ ಹೇಳಿದ್ದರೆನ್ನಲಾಗಿದೆ. ಇದರಿಂದ ಮುನಿಸಿಕೊಂಡ ಬಾಲಕ ಶ್ರೀವತ್ಸ, ಅಕ್ಟೋಬರ್ 22 ರಂದು ವಾಡಿಕೆಯಂತೆ ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ತೆರಳಿದ್ದವನು ಇದುವರೆಗೂ ಮರಳಿ ಮನೆಗೆ ಬಂದಿಲ್ಲ. ಬಾಲಕನು ಪುತ್ತೂರಿನಿಂದ ರೈಲು ಹತ್ತಿ ಮಂಗಳೂರಿನತ್ತ ತೆರಳಿರಬಹುದು ಎಂಬ ಬಲವಾದ ಅನುಮಾನವನ್ನು ಪೋಷಕರು ಹಾಗೂ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಮಗ ಕಾಣೆಯಾದ ದಿನದಿಂದ ಅನ್ನ ನೀರು ತೊರೆದು ಪೋಷಕರು ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದು, “ಮನೆಯ ಪರಿಸ್ಥಿತಿ ನಿನಗೆ ಗೊತ್ತಿದೆ, ಯಾಕೆ ಹೀಗೆ ಮಾಡಿದೆ ಮಗ, ಎಲ್ಲಿದ್ದರೂ ಬಾ” ಎಂದು ಕಣ್ಣೀರು ಸುರಿಸುತ್ತಿದ್ದಾರೆ.
ಶ್ರೀವತ್ಸನ ಪತ್ತೆಗಾಗಿ ಕುಟುಂಬಸ್ಥರು, ಸಾರ್ವಜನಿಕರು, ಸ್ನೇಹಿತರು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಪತ್ತೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಸುಳ್ಯದಲ್ಲಿ ಚರಂಡಿಗೆ ಬಿದ್ದ ಮಗುವನ್ನು ತಕ್ಷಣವೇ ಮೇಲಕ್ಕೆತ್ತಿ ಜೀವ ಉಳಿಸಿದ ಸ್ಥಳೀಯರು
ಈ 16 ವರ್ಷದ ಬಾಲಕ ಎಲ್ಲಾದರೂ ಕಂಡುಬಂದಲ್ಲಿ ಅಥವಾ ಆತನ ಬಗ್ಗೆ ಯಾವುದೇ ಸುಳಿವು ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕೆಳಗಿನ ಫೋನ್ ಸಂಖ್ಯೆಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ:
ಸಂಪರ್ಕ ಸಂಖ್ಯೆಗಳು:
📲 7892809788
📲 9844041650
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

