ಇಬ್ಬರು ಹೆಂಡ್ತಿಯರ ಜೊತೆ ಒಂದೇ ಮನೆಯಲ್ಲಿ ಸಂಸಾರ ಮಾಡ್ತೀನಿ!: ಪೊಲೀಸ್ ಠಾಣೆಯಲ್ಲೇ ಕಿಲಾಡಿ ಗಂಡನ ಹೈಡ್ರಾಮಾ

ತಮಿಳುನಾಡು: ಪ್ರೀತಿ, ವಿಶ್ವಾಸದ ಸಂಸಾರದಲ್ಲಿ ಗಂಡನ ಅತಿಯಾದ ಆಸೆ ಹಾಗೂ ರಹಸ್ಯ ನಡವಳಿಕೆ ಕೌಟುಂಬಿಕ ಕಲಹಕ್ಕೆ ಕಾರಣವಾಗಿ, ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ಹೈಡ್ರಾಮಾ ಸೃಷ್ಟಿಸಿರುವ ವಿಲಕ್ಷಣ ಘಟನೆಯೊಂದು ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಪತ್ನಿಯರ ಜೊತೆ ಒಂದೇ ಸೂರಿನಡಿ ಬಾಳುತ್ತೇನೆ ಎಂದು ಹಠ ಹಿಡಿದ ಪತಿಯನ್ನು ಪೊಲೀಸರು ಕಾನೂನು ಭಾಷೆಯಲ್ಲೇ ಸರಿಪಡಿಸಿ ಮೊದಲ ಪತ್ನಿಯೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಮದುರೈ ಸಮೀಪದ ಸೆಂಕುರಿಚ್ಚಿ ನಿವಾಸಿ, 28 ವರ್ಷದ ಸಡೆಯಾಂಡಿ ಈ ಕಥೆಯ ನಾಯಕ. ವೆಲ್ಡಿಂಗ್ ಕೆಲಸ ಮಾಡುವ ಈತನಿಗೆ ಸುಮತಿ ಎಂಬ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇವರ ಸಂಸಾರ ಚೆನ್ನಾಗಿಯೇ ಇತ್ತಾದರೂ, ಕಳೆದ ಕೆಲವು ತಿಂಗಳುಗಳಿಂದ ಸಡೆಯಾಂಡಿ ಮೊಬೈಲ್‌ನಲ್ಲಿ ರಹಸ್ಯವಾಗಿ ಯಾರೊಂದಿಗೋ ಮಾತನಾಡಲು ಶುರು ಮಾಡಿದ್ದ. ಇದನ್ನು ಪತ್ನಿ ಪ್ರಶ್ನಿಸಿದಾಗ ಗಂಡ-ಹೆಂಡತಿ ನಡುವೆ ಗಲಾಟೆ ನಡೆದಿತ್ತು.

ಕೆಲ ದಿನಗಳ ಹಿಂದೆ ಸಡೆಯಾಂಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ದಿಢೀರನೆ ನಾಪತ್ತೆಯಾಗಿದ್ದ. ಕಂಗಾಲಾದ ಮೊದಲ ಪತ್ನಿ ಸುಮತಿ, ಮದುರೈ ಪೊಲೀಸ್ ಠಾಣೆಯಲ್ಲಿ ಗಂಡನನ್ನು ಹುಡುಕಿಕೊಡುವಂತೆ ದೂರು ನೀಡಿದ್ದರು. ಪೊಲೀಸರು ಮೊಬೈಲ್ ಟವರ್ ಸಿಗ್ನಲ್ ಆಧರಿಸಿ ತನಿಖೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಸಡೆಯಾಂಡಿ ನಾಪತ್ತೆಯಾಗಿರಲಿಲ್ಲ, ಬದಲಾಗಿ ಪಿಚ್ಚಂಪಟ್ಟಿಯ 21 ವರ್ಷದ ನಾಗೇಶ್ವರಿ ಎಂಬ ಯುವತಿಗೆ ತನಗೆ ಮೊದಲೇ ಮದುವೆಯಾಗಿರುವ ವಿಚಾರ ಮುಚ್ಚಿಟ್ಟು ರಹಸ್ಯವಾಗಿ ಎರಡನೇ ಮದುವೆಯಾಗಿದ್ದ.

ಪೊಲೀಸರು ಸಡೆಯಾಂಡಿ, ಮೊದಲ ಪತ್ನಿ ಸುಮತಿ ಹಾಗೂ ಎರಡನೇ ಪತ್ನಿ ನಾಗೇಶ್ವರಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ಈ ವೇಳೆ ಸಡೆಯಾಂಡಿ ಪೊಲೀಸರ ಎದುರೇ ವಿಲಕ್ಷಣ ಬೇಡಿಕೆಯಿಟ್ಟಿದ್ದಾನೆ. “ನನ್ನ ಮೊದಲ ಹೆಂಡತಿ ಸದಾ ಜಗಳ ಆಡುತ್ತಾಳೆ, ಅದಕ್ಕೆ ನೆಮ್ಮದಿಗಾಗಿ ಎರಡನೇ ಮದುವೆಯಾಗಿದ್ದೇನೆ. ಈಗ ಕಾನೂನು ಏನೇ ಹೇಳಿದರೂ ನನಗೆ ಚಿಂತೆಯಿಲ್ಲ, ಇಬ್ಬರು ಹೆಂಡತಿಯರನ್ನೂ ನನ್ನೊಂದಿಗೇ ಕಳುಹಿಸಿಕೊಡಿ. ಇಬ್ಬರನ್ನೂ ಒಂದೇ ಮನೆಯಲ್ಲಿಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎಂದು ಹಠ ಹಿಡಿದಿದ್ದಾನೆ.

ಇದನ್ನೂ ಓದಿ: ಮೇಘಾಲಯ ಗಡಿಯಲ್ಲಿ ಬಿಗುವಿನ ವಾತಾವರಣ, ಬಿಎಸ್‌ಎಫ್-ಬಿಜಿಬಿ ಮುಖಾಮುಖಿ!: ‘ನೋ-ಮ್ಯಾನ್ಸ್ ಲ್ಯಾಂಡ್’ನಲ್ಲಿ ಸಿಲುಕಿದ 55 ವರ್ಷದ ವ್ಯಕ್ತಿ; ವೈರಲ್ ಆಯ್ತು ವಿಡಿಯೋ!

ಮತ್ತೊಂದೆಡೆ ಎರಡನೇ ಪತ್ನಿ ನಾಗೇಶ್ವರಿ, “ಅವರಿಗೆ ಮೊದಲೇ ಮದುವೆಯಾಗಿದ್ದು ಈಗ ಗೊತ್ತಾದರೂ ನಾನು ಅವರೊಂದಿಗೇ ಬದುಕುತ್ತೇನೆ” ಎಂದಿದ್ದಾಳೆ. ಇತ್ತ ಮೊದಲ ಪತ್ನಿ ಸುಮತಿ, “ನನ್ನ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ನನಗೆ ನನ್ನ ಗಂಡನೇ ಬೇಕು” ಎಂದು ಕಣ್ಣೀರು ಹಾಕಿದ್ದಾರೆ. ಪರಿಸ್ಥಿತಿ ಹದಗೆಡುವುದನ್ನು ಅರಿತ ಮದುರೈ ಪೊಲೀಸರು ಸಡೆಯಾಂಡಿಯನ್ನು ಪ್ರತ್ಯೇಕವಾಗಿ ಕರೆದೊಯ್ದು ಕಾನೂನಿನ ಭಾಷೆಯಲ್ಲಿ ಬಿಸಿ ಮುಟ್ಟಿಸಿದರು. “ಮೊದಲ ಪತ್ನಿ ಜೀವಂತವಾಗಿರುವಾಗ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗುವುದು ಕಾನೂನುಬದ್ಧವಾಗಿ ಶಿಕ್ಷಾರ್ಹ ಅಪರಾಧ. ಹೆಂಡತಿ ದೂರು ನೀಡಿದರೆ ನೇರವಾಗಿ ಜೈಲು ಪಾಲಾಗುತ್ತೀಯಾ” ಎಂದು ಎಚ್ಚರಿಕೆ ನೀಡಿದರು.

ಕೊನೆಗೂ ಪೊಲೀಸರ ಕಠಿಣ ಎಚ್ಚರಿಕೆಗೆ ಸಡೆಯಾಂಡಿ ಮೊದಲ ಪತ್ನಿಯೊಂದಿಗೆ ಹೋಗಲು ಒಪ್ಪಿದ್ದಾನೆ. ಎರಡನೇ ಪತ್ನಿ ನಾಗೇಶ್ವರಿಗೂ ಬುದ್ಧಿವಾದ ಹೇಳಿ ಆಕೆಯ ಪೋಷಕರೊಂದಿಗೆ ಕಳುಹಿಸಲಾಗಿದ್ದು, ಮೊದಲ ಪತ್ನಿ ಸುಮತಿ ಮತ್ತು ಮಕ್ಕಳೊಂದಿಗೆ ಬಾಳುವಂತೆ ಸಡೆಯಾಂಡಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕಳುಹಿಸಿಕೊಡಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು